
ಅಬಕಾರಿ ಹಗರಣ
ನವದೆಹಲಿ/ ಹೈದರಾಬಾದ್, ಮಾ.೮- ದೆಹಲಿ ಅಬಕಾರಿ ನೀತಿ ಅನುಷ್ಠಾನದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಆರ್ ಎಸ್ ಪಕ್ಷದ ನಾಯಕಿ ಕೆ.ಕವಿತಾಗೆ ಸಂಕಷ್ಟ ಎದುರಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ನಾಳೆ ಜಾರಿ ನಿರ್ದೇಶನಾಲಯ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಆಪ್ ಮುಖಂಡ ಮನೀಷ್ ಸಿಸೋಡಿಯಾ ಅವರನ್ನು ಅಬಕಾರಿ ಹಗರಣದಲ್ಲಿ ಬಂಧಿಸಿದ ಬೆನ್ನಲ್ಲೇ ಇಡಿ ಕವಿತಾರಿಗೆ ಸಮನ್ಸ್ ಜಾರಿ ಮಾಡಿದೆ
ಭಾರತ್ ರಾಷ್ಟ್ರ ಸಮಿತಿ ಪಕ್ಷದ ವಿಧಾನಪರಿಷತ್ ಸದಸ್ಯೆ ೪೪ ವರ್ಷದ ಕವಿತಾ ಅವರಿಗೆ ನಾಳೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಜಾರಿನಿರ್ದೇಶನಾಲಯ ಬಂಧಿಸಿದ ಬೆನ್ನಲ್ಲೇ, ಕೆ. ಕವಿತಾಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ.
ರಾಮಚಂದ್ರ ಪಿಳ್ಳೈ ಅವರು “ದಕ್ಷಿಣ ಭಾರತದ ಗುಂಪು ಪ್ರತಿನಿಧಿಸಿದ್ದಾರೆ” ಎಂದು ಜಾರಿ ನಿರ್ದೇಶನಾಲಯ ಈ ಹಿಂದೆ ಹೇಳಿತ್ತು, ಇದು ಕವಿತಾ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿರುವ ಮದ್ಯದ ನೀತಿ ಅನುಷ್ಠಾನದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.
ಅರಬಿಂದೋ ಫಾರ್ಮಾದ ಪ್ರವರ್ತಕ ಶರತ್ ರೆಡ್ಡಿ, ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ, ಕವಿತಾ ಮತ್ತು ಇತರರು ಇದ್ದಾರೆ.ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಕೋರಿ ಮಾರ್ಚ್ ೧೦ ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕವಿತಾ ಹೇಳಿದ್ದರು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ ೨೦೨೧-೨೨ ರ ಅಬಕಾರಿ ನೀತಿ ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಕೆಲವು ಡೀಲರ್‌ಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿ ಸಲಾಗಿದೆ, ಇದರ ಬದಲು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸ ಲಾಗಿದೆ.
ಆರೋಪದ ನಂತರ ಮದ್ಯ ನೀತಿ ರದ್ದುಪಡಿಸಲಾಯಿತು ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಶಿಫಾರಸು ಮಾಡಿದರು ನಂತರ ಇಡಿ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಕಾನೂನು ಸಲಹೆ ಕೇಳುವೆ
ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಕುರಿತು ಕಾನೂನು ಸಲಹೆ ಪಡೆಯುವೆ ಆನಂತರ ಹಾಜರಾಗಬೇಕೋ ಬೇಡವೋ ನಿರ್ಧರಿಸುತ್ತೇನೆ ಎಂದು ಬಿಆರ್ ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣ ಸಂಬಂದ ಜಾರಿ ನಿರ್ದೇಶನಾಲಯದ ಮುಂದೆ ನಾಳೆ ಹಾಜರಾಗುವ ಕುರಿತು ಕಾನೂನು ಅಭಿಪ್ರಾಯ ಕೇಳುತ್ತೇನೆ ಎಂದಿದ್ದಾರೆ.
ಜಾರಿ ನಿರ್ದೇಶನಾಲಯದ ಸಮನ್ಸ್ ಬಗ್ಗೆ ಮಾಹಿತಿ ನೀಡಿದ ಅವರು ಬಿಆರ್‌ಎಸ್ ಪಕ್ಷದ ವಿರುದ್ಧ ಕೇಂದ್ರದ ಸರ್ಕಾರ ಬೆದರಿಕೆಯ ತಂತ್ರಗಳನ್ನು ಅನುಸರಿಸುತ್ತಿದೆ.ಅದು ನಡೆಯುವುದಿಲ್ಲ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸಲು ಪಕ್ಷ ಹೋರಾಟ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.