ಕೆಸಿಆರ್ ಪಾದ ಸ್ಪರ್ಶಿಸಿ ವಿವಾದ ಸೃಷ್ಟಿಸಿದ ಅಧಿಕಾರಿ

ಹೈದರಾಬಾದ್, ನ ೧೭- ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಾದವನ್ನು ತೆಲಂಗಾಣದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಸ್ಪರ್ಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣ ಸಖತ್‌ವೈರಲ್‌ಆಗಿದೆ. ಈ ದೃಶ್ಯ ನೋಡಿ ಅನೇಕರು ಕಿಡಿಕಾರಿದ್ದಾರೆ.

ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ರಾಜ್ಯ ನಿರ್ದೇಶಕ ಜಿ. ಶ್ರೀನಿವಾಸ್ ರಾವ್ ಅವರು ಗೌರವಾರ್ಥವಾಗಿ ಮುಖ್ಯಮಂತ್ರಿಯವರ ಪಾದ ಸ್ಪರ್ಶಿಸುತ್ತಿರುವ ವೀಡಿಯೊವನ್ನು ಭಾರಿ ಸದ್ದು ಮಾಡಿದೆ.

ನಿವೃತ್ತ ಅಧಿಕಾರಿಗಳು ರಾಜಕೀಯ ಸೇರುವುದು ಅರ್ಥವಾಗುವಂಥದು. ಆದರೆ ಅಧಿಕಾರಿಗಳು ಇನ್ನೂ ಸೇವೆಯಲ್ಲಿರುವಾಗ ಮುಖ್ಯಮಂತ್ರಿಯೊಬ್ಬರ ಪಾದ ಮುಟ್ಟುವ ಪ್ರವೃತ್ತಿ ಸಲ್ಲದು ಎಂದು ಬಿಜೆಪಿ ಮಾಜಿ ಎಂಎಲ್‌ಸಿ ಎನ್. ರಾಮಚಂದರ್ ರಾವ್ ಅವರು ಹೇಳಿದ್ದಾರೆ.
ಕಾಲು ಮುಗಿದ ಆರೋಪಕ್ಕೊಳಗಾಗಿರುವ ಅಧಿಕಾರಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಈ ಹಿಂದೆ ಸಿದ್ದಿಪೇಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ವೆಂಕಟರಾಮ್ ರೆಡ್ಡಿ ಅವರು ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಪಾದ ಮುಟ್ಟಿದಾಗ ಎಲ್ಲೆಡೆ ಭಾರಿ ವಿವಾದವನ್ನು ಸೃಷ್ಟಿಸಿತ್ತು.