
(ಸಂಜೆವಾಣಿ ವಾರ್ತೆ)
ಔರಾದ : ಮಾ.9:ಹೋಳಿ ಹಬ್ಬ ಎಂದರೆ ಎಲ್ಲರಿಗೂ ನೆನಪಾಗೋದು ವರ್ಣರಂಜಿತ ಬಣ್ಣಗಳಲ್ಲಿ ಆಡುವುದು. ದೊಡ್ಡವರೂ ಚಿಕ್ಕವರೂ ಪರಸ್ಪರ ಮುಖಕ್ಕೆ ಬಣ್ಣ ಬಳಿದುಕೊಂಡು ಕುಣಿದು ಕುಪ್ಪಳಿಸುತ್ತಾರೆ. ಆದರೆ ತಾಲೂಕಿನ ಯನಗುಂದಾ ಶಾಲಾ ವಿದ್ಯಾರ್ಥಿಗಳು ಮಾತ್ರ ಹೋಳಿ ಹಬ್ಬವನ್ನು ಮಕ್ಕಳಿಗೆ ಕೆಸರು ಸ್ನಾನ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದರು.
ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನೈಸರ್ಗಿಕ ಚಿಕಿತ್ಸೆಗಳಲ್ಲಿ ಒಂದಾಗಿರುವ ಕೆಸರು ಸ್ನಾನ ಮಾಡಿಸುವ ಮಡ್ ಬಾತ್ ಕಾರ್ಯಕ್ರಮವನ್ನು ಗ್ರಾಮದ ನಾಟಿವೈದ್ಯರಾಗಿರುವ ಬಸವರಾಜ ಘೂಳೆ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂತೋಷ ಮುಸ್ತಾಪೂರೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಿಗಧಿತ ಸಮಯಕ್ಕೆ ಬಸವರಾಜ ಘೂಳೆ ಅವರ ಹೊಲಕ್ಕೆ ಬಂದು ಸೇರಿದರು.
ಮಡ್ ಬಾತಗಾಗಿ ಎರಡು ದಿನದ ಹಿಂದೆ ಹುತ್ತಿನ ಮಣ್ಣು ಸಂಗ್ರಹ ಮಾಡಿ, ನೀರಿನಲ್ಲಿ ನೆನೆಯಿಸಲಾಗಿತ್ತು. ನೆನೆಸಿದ ಮಣ್ಣನು ತುಳಿದು ಮಕ್ಕಳು ಮೃದು ಮಾಡಿದರು. ನಂತರ ಮಕ್ಕಳು ಮತ್ತು ಹಿರಿಯರು ಕಾಲಿನಿಂದ ಹಿಡಿದು ತಲೆಯ ವರೆಗೆ ಒರೆಸಿಕೊಂಡು, ಬಿಸಿಲಲ್ಲಿ ಕುಳಿತು ಮಣ್ಣು ಒಣಗಿದ ನಂತರ ಸ್ನಾನ ಮಾಡಿ ಸಂತಸ ಪಟ್ಟರು.
ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣವು ಕೇಮಿಕಲ್ ಅಂಶದಿಂದ ಕೂಡಿದ್ದು, ಕೇಮಿಕಲ್ ಮಿಶ್ರಿತ ಬಣ್ಣದ ಉಪಯೋಗದಿಂದ ನಮ್ಮ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮವುಂಟು ಮಾಡುತ್ತದೆ ಆದ್ದರಿಂದ ಮಕ್ಕಳಿಗೆ ಹಬ್ಬದೊಂದಿಗೆ ಮಣ್ಣಿನ ಮಹತ್ವ ತಿಳಿಸುವ ಪ್ರಯತ್ನವನ್ನು ಮಡ್ ಬಾತ (ಕೆಸರು ಸ್ನಾನ) ಮೂಲಕ ಮಾಡಲಾಗಿದೆ ಎಂದು ಯನಗುಂದಾ ಪ್ರೌಢ ಶಾಲೆಯ ಮುಖ್ಯಗುರು ಶಾಮಸುಂದರ ಖಾನಾಪೂರಕರ್ ಅವರು ತಿಳಿಸಿದರು. ರಂಗಿನ ಹೋಳಿ ಹಬ್ಬವು ಪ್ರೀತಿ, ಸಹೋದರತೆ ಸಂದೇಶದ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಂತೋಷ ಮೂಡಿಸುತ್ತದೆ ಸದುದ್ದೇಶ ಹೊಂದಿದೆ ಎಂದು ತಿಳಿಸಿದರು.
ನಾಟಿ ವೈದ್ಯರಾಗಿರುವ ಬಸವರಾಜ ಘೂಳೆ ಅವರು ಮಾತನಾಡಿ ಮಾನವನ ದೇಹದ ಅಂಗಾಂಗಗಳಲ್ಲಿ ಚರ್ಮವು ಒಂದು. ಚರ್ಮ ನಮ್ಮ ಆರೋಗ್ಯ ರಕ್ಷಣೆಯ ದೊಡ್ಡ ಅಂಗವಾಗಿದೆ. ಮಡ್ ಬಾತದಿಂದ ಚರ್ಮ ರೋಗಗಳ ನಿವಾರಣೆ. ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಪಚನ ಕ್ರೀಯೆ ಮತ್ತು ರಕ್ತ ಪರಿಚಲನೆ ವೃದ್ಧಿಗೊಳ್ಳುತ್ತದೆ. ಪ್ರತಿಯೊಬ್ಬರು ವರ್ಷಕೊಮ್ಮೆಯಾದರು ಮಡಬಾತ್ ಮಾಡುವುದು ಸೂಕ್ತವೆಂದು ತಿಳಿಸಿದರು.
ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಸಹಾಸ, ಛಲ, ಆತ್ಮ ವಿಶ್ವಾಸ, ಸೌರ್ಹಾದತೆ, ಸಹಬಾಳ್ವೆ, ಮಾನವೀಯ ಗುಣಗಳು ಬೆಳೆಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ್, ಶಿವಕುಮಾರ ಮಜಗೆ, ಅಮರ ಮುಕ್ತೆದಾರ, ದೈಹಿಕ ಶಿಕ್ಷಕ ಪ್ರಶಾಂತಕುಮಾರ ಪಾಟೀಲ, ವಿದ್ಯಾರ್ಥಿ ವಸತಿ ನಿಲಯದ ಮೇಲ್ವಿಚಾರಕ ಸಂತೋಷಕುಮಾರ ಮುಸ್ತಾಪುರೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.
ಉತ್ತಮ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಯನಗುಂದಾ ಪ್ರೌಢ ಶಾಲೆಯ ಸೌಟ್ಸ್ ಮತ್ತು ಗೈಡ್ಸ್ ಘಟಕವು ಮಾದರಿಯಾಗಿದ್ದು, ಮಡಬಾತ್ ದೊಡ್ಡ ದೊಡ್ಡ ನಗರದಲ್ಲಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಇಂತಹ ಚಿಕಿತ್ಸಾದಾಯಕವಾದ ಮಡಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷವನ್ನುಂಟು ಮಾಡಿದೆ.
ಪ್ರಶಾಂತಕುಮಾರ ಪಾಟೀಲ