ಕೆಸರು ಗದ್ದೆಯಾದ ಸಿಟಿ ಮಾರುಕಟ್ಟೆ

ಬೆಂಗಳೂರು, ಮೇ.೨- ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಧಾರಕಾರ ಮಳೆಗೆ ಇಲ್ಲಿನ ಸಿಟಿ ಮಾರುಕಟ್ಟೆ ಕೆಸರು ಗದ್ದೆ ಆಗಿ ಮಾರ್ಪಟ್ಟಿದ್ದು, ಇದರಿಂದ ಬೈಕ್ ಸವಾರರು ಹಾಗೂ ಸಾರ್ವಜನಿಕರ ನಿದ್ದೆಗೆಡುವಂತಾಗಿದೆ.

ಸ್ಥಳೀಯರು, ವ್ಯಾಪಾರಿಗಳು, ಪ್ರಯಾಣಿಕರು ಮಳೆ ಬಂದರೆ ಮನೆ ಬಿಟ್ಟು ಹೊರ ಬರಲಾರದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಿಟಿ ಮಾರುಕಟ್ಟೆಗೆ ಪ್ರತಿನಿತ್ಯ ಲಕ್ಷಾಂತರ ಜನರು ಬರುತ್ತಾರೆ.ಆದರೆ, ಇಲ್ಲಿನ ರಸ್ತೆಯೂ ಅವೈಜ್ಞಾನಿಕವಾಗಿದ್ದು, ಮಳೆ ಬಂದರೆ ನೀರು ನಿಲ್ಲಲಿದೆ.ಜೊತೆಗೆ, ಕೆಸರು ಗದ್ದೆಯಂತೆ ಆಗಿದ್ದು, ತ್ಯಾಜ್ಯದಲ್ಲೇ ಓಡಾಟ ನಡೆಸಬೇಕಾಗಿದೆ. ಇನ್ನೊಂದೆಡೆ ಪಾದಚಾರಿಗಳು ನಡೆದಾಡಲು ಆಗುತ್ತಿಲ್ಲ. ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡರೇ ಯಾರು ಜವಾಬ್ದಾರಿ ?ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ರಸ್ತೆಯಲ್ಲಿ ತಿರುಗಾಡಲು ಆಗದೆ ಸಾರ್ವಜನಿಕರು ಸಂಕಟ ಅನುಭವಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳಾಗಲಿ, ಸಿಬ್ಬಂದಿ ಆಗಲಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗಿದೆ.

ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೆಸರು ಗದ್ದೆಯಾದ ಸಿಟಿ ಮಾರುಕಟ್ಟೆ.