ಕೆಸರು ಗದ್ದೆಯಾದ ತಾಲೂಕಿನ ಕಿಕ್ಕೇರಿ ಸಂತೆ ಆವರಣ

ಕೆ.ಆರ್.ಪೇಟೆ: ನ.20:- ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಜಿಡಿಮಳೆಗೆ ತಾಲೂಕಿನ ಕಿಕ್ಕೇರಿ ಗ್ರಾಮದ ಸಂತೆ ಆವರಣವು ಮಳೆ ನೀರಿನಿಂದ ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದೆ.
ಇದರಿಂದಾಗಿ ಪ್ರತೀ ಶುಕ್ರವಾರ ಕಿಕ್ಕೇರಿ ಪಟ್ಟಣದ ಸಂತೆಯಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿಯ ತೆಂಗಿನ ಕಾಯಿಯ ವ್ಯಾಪಾರ ವಹಿವಾಟು ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಬೇಸರ ಮೂಡಿಸಿದೆ. ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸಂತೆ ಮಾಳದಲ್ಲಿ ನೀರು ನಿಂತು ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಲಾಗದೆ ಪರದಾಡುವಂತಾಗಿದೆ. ಇಂದು ಸಂತೆಯ ದಿನವಾದ್ದರಿಂದ ಕಾಯಿ ತುಂಬಿದ ಲಾರಿಗಳು ಹೊರಹೋಗಲಾಗದೆ ಹೂತುಕೊಂಡಿವೆ.
ಈ ಕೂಡಲೇ ಎಪಿಎಂಸಿ ಅಧಿಕಾರಿಗಳು ಮತ್ತು ಎಪಿಎಂಸಿ ಆಡಳಿತ ಮಂಡಳಿಯವರು ಕ್ರಮ ಕೈಗೊಂಡು ಸಂತೆ ಆವರಣವನ್ನು ಡಾಂ¨ರೀಕರಣ ಅಥವಾ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಬೇಕು ಮಾರುಕಟ್ಟೆ ಆವರಣದಲ್ಲಿ ನೀರು ನಿಲ್ಲದಂತೆ ಸುಲಭವಾಗಿ ಹೊರಹೋಗುವಂತಾಗಬೇಕು, ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಮಳೆಯಿಂದ ರಕ್ಷಣೆಗಾಗಿ ಹಲವು ಅನುಕೂಲಗಳನ್ನು ಕಲ್ಪಿಸಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.