ಕೆಸರು ಗದ್ದೆಯಾಗಿರುವ ರಸ್ತೆ ದುರಸ್ಥಿಗೊಳಿಸಲು ಆಗ್ರಹ

ಕಾಳಗಿ.ಜು.27: ತಾಲೂಕಿನ ಕೋಡ್ಲಿ ಗ್ರಾಮದಿಂದ ಮೋಘಾ ಗ್ರಾಮಕ್ಕೆ ಹೋಗಬೇಕಾದರೆ ರಸ್ತೆ ಕೆಸರು ಗದ್ದೆಯಂತಾಗಿದ್ದು ಯಾರ ಮನವಿಗೂ ಬೆಲೆಯು ಸಿಗದ ಬಗ್ಗೆ ಗ್ರಾಮಸ್ಥರಿಂದ ಟೀಕೆ ವ್ಯಕ್ತವಾಗಿದೆ ಹಲವು ವರ್ಷಗಳಿಂದ ಮಣ್ಣಿನ ರಸ್ತೆಯಲ್ಲಿ ಸಂಚಾರ ನಡೆಸುವ ದೌರ್ಭಾಗ್ಯ ಇಲ್ಲಿನ ಗ್ರಾಮಸ್ಥರ ಡಾಂಬರ್ ಕಾಮಗಾರಿಯು ಕನಸಾಗಿಯೇ ಉಳಿದಿದೆ ಎಂದು ದಲಿತ ಪ್ಯಾಂಥರ್ ವಿದ್ಯಾರ್ಥಿ ಒಕ್ಕೂಟ ಜಿಲ್ಲಾಧ್ಯಕ್ಷ ದಿನೇಶ ಮೋಘಾ ಹೇಳಿದರು.

ಈ ರಸ್ತೆ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲಿ ಇಲ್ಲಿ ಸ್ವಲ್ಪ ಡಾಂಬರೀಕರಣ ಮಾಡಿದರೆ ಅದು ಕೂಡ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಮೋಘಾ ಗ್ರಾಮಕ್ಕೆ ಬರಲು ಯಾವ ಕಡೆಯಿಂದಲೂ ರಸ್ತೆ ಸರಿ ಇಲ್ಲ. ಸುಲೇಪೇಟನಿಂದ – ಮೋಘಾ ಗ್ರಾಮಕ್ಕೆ ಬರಲು ರಸ್ತೆಯು ಸಂಪೂರ್ಣ ಹದಗೆಟ್ಟಿದೆ.

ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಇದು ತೊಂದರೆಯಾಗಿದೆ. ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳು ಸರ್ಕಸ್ ಮಾಡುತ್ತಾ ನಡೆಯಬೇಕಿದೆ. ಗೊಬ್ಬುರ, ಬಿತ್ತನೆ ಬೀಜ ಇತ್ಯಾದಿ ಸಾಮಗ್ರಿಗಳನ್ನು ಮಾರುಕಟ್ಟೆಯಿಂದ ಈ ರಸ್ತೆ ಮೂಲಕ ತರಬೇಕಿದೆ. ರಸ್ತೆ ದುಸ್ಥಿತಿ ಕಾರಣ ಚಾಲಕರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ.

ಈ ರಸ್ತೆ ದುರಸ್ತಿಗೆ ಗ್ರಾಮಸ್ಥರು ಹಲವಾರು ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ನಿರ್ಲಕ್ಷಿಸಿದ್ದಾರೆ. ಈ ರಸ್ತೆ ಡಾಂಬರೀಕರಣ ಮಾಡಿದರೆ ಹಲವಾರು ಹಳ್ಳಿಗಳ ಸಾವಿರಾರು ಜನರ ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಾದ ಶ್ಯಾಮರಾವ ಮಾಸ್ಟರ, ಶಿವಾಜಿ ಪಾಟೀಲ, ಮೊಹಮ್ಮದ ಪಟೇಲ, ಸೋಯಲ್ ಪಟೇಲ ಒತ್ತಾಯಿಸಿದ್ದಾರೆ.