ಕೆವಿಜಿ- ವೈದ್ಯರಿಗಾಗಿ ಸಾಲ ಯೋಜನೆ

ಧಾರವಾಡ ಎ.11-ವೈದ್ಯಕೀಯ ಕ್ಷೇತ್ರದಲ್ಲಿನ ಹೆಚ್ಚಿದ ಸಂಶೋಧನೆ ನಿಖರ ಚಿಕಿತ್ಸೆಗೆ ಸಹಾಯಕವಾಗಿದೆ ಎಂದು ವಿಶ್ರಾಂತ ಸಿವಿಲ್ ಸರ್ಜನ್ ಮತ್ತು ಖ್ಯಾತ ನೇತ್ರ ತಜ್ಞ ಡಾ: ವಿಜಯ ವಿಠ್ಠಲ ಮನಗೋಳಿ ಇಂದಿಲ್ಲಿ ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ವೈದ್ಯರಿಗಾಗಿ0iÉುೀ ರೂಪಿಸಿದ ಸಾಲ ಯೋಜನೆ “ವಿಕಾಸ ನವ ಸಂಜೀವಿನಿ” ಯನ್ನು ಧಾರವಾಡದಲ್ಲಿ ಏರ್ಪಟ್ಟ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ದಿನಗಳೆದಂತೆ ಔಷಧಿ ಶಾಸ್ತ್ರದಲ್ಲೂ ಸಾಕಷ್ಟು ಸಂಶೋದನೆಯಾಗಿದ್ದು ಜನಸಾಮಾನ್ಯರ ಜೀವಿತಾವಧಿ ಹೆಚ್ಚಿಸುವಂತೆ ಮಾಡಿದೆ ಎಂದರು. ಬ್ಯಾಂಕುಗಳ ಸಹಾಯವಿಲ್ಲದೆ ಆಸ್ಪತ್ರೆ ಕಟ್ಟಡ, ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿ ಅಸಾಧ್ಯವೆಂದ ಅವರು ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಬ್ಯಾಂಕುಗಳ ಕೊಡುಗೆ ಅಪಾರವಾಗಿದೆ ಎಂದರು. ಬದಲಾದ ಕಾಲಮಾನದಲ್ಲಿ ಮಾನವೀಯತೆ ಮರೆಯದೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅವರು ವೈದ್ಯ ವೃಂದಕ್ಕೆ ಕರೆ ನೀಡಿದರು.
ಬ್ಯಾಂಕ್ ಅಧ್ಯಕ್ಷ ಪಿ ಗೋಪಿಕೃಷ್ಣ ಮಾತನಾಡಿ ವೈದ್ಯಕೀಯ ಕ್ಷೇತ್ರದ ಬೇಡಿಕೆಗನುಗುಣವಾಗಿ ಬ್ಯಾಂಕು ನೂತನ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಅನ್ವಯ ಆಸ್ಪತ್ರೆಯ ಕಟ್ಟಡ, ಆಧುನಿಕ ವದ್ಯಕೀಯ ಉಪಕರಣಗಳ ಖರೀದಿ, ಕ್ಲಿನಿಕಲ್ ಲ್ಯಾಬ್, ಔಷಧಾಲಯಗಳ ಸ್ಥಾಪನೆಗೆ ಸಂಬಂಧಿಸಿ ಒಟ್ಟಾರೆ ಯೋಜನಾ ವೆಚ್ಚದ 85 ಪ್ರತಿಶತದಷ್ಟು ಸಾಲ ನೀಡಲಾಗುವುದು. ಇದಲ್ಲದೆ ಆಸ್ಪತ್ರೆಯ ದೈನಂದಿನ ನಿರ್ವಹಣೆಗೂ ಗರಿಷ್ಠ 25 ಲಕ್ಷಗಳವರೆಗೆ ಓಡಿ ಸೌಲಭ್ಯ ಈ ಸಾಲ ಯೋಜನೆ ಒಳಗೊಂಡಿದೆ. ಬಡ್ಡಿದರವನ್ನು ಸಾಕಷ್ಟು ಕಡಿಮೆ ಮಾಡಲಾಗಿದ್ದು ರೂ. 10 ಲಕ್ಷಗಳವರೆಗೆ ತ್ರತೀಯ ಭದ್ರತೆ ನೀಡುವ ಅಗತ್ಯವಿರುವುದಿಲ್ಲ. ಓಡಿ ಸೌಲಭ್ಯ ಹೊರತುಪಡಿಸಿ ಅವಧಿ ಸಾಲವನ್ನು ಮರುಪಾವತಿಸಲು 9 ವರ್ಷಗಳ ಕಾಲಾವಧಿ ನೀಡಲಾಗಿದೆ ಎಂದು ಗೋಪಿಕೃಷ್ಣ ಹೇಳಿದರು. ಆಧುನಿಕ ಚಿಕಿತ್ಸೆ ನಗರಗಳಲ್ಲೇ ಕೇಂದ್ರೀಕೃತಗೊಳ್ಳುತಲಿದ್ದು ಅರೆಪಟ್ಟಣ ಹಾಗೂ ದೊಡ್ಡ ಹಳ್ಳಿಗಳಲ್ಲೂ ಆಸ್ಪತ್ರೆಗಳ ಮೂಲಕ ಆಧುನಿಕ ವೈದ್ಯಕೀಯ ಸೌಲಭ್ಯ ದೊರೆಯುವಂತಾಗ ಬೇಕು ಎಂದರು. ಈ ಸಾಲ ಯೋಜನೆಯನ್ವಯ ಸಾಲವನ್ನು ಆಲೋಪತಿ ಮಾತ್ರವಲ್ಲದೆ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರು ಹಾಗೂ ದಂತ ವೈದ್ಯರಿಗೂ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾಪ್ರಬಂಧಕರಾದ ಬಿ ಸಿ ರವಿಚಂದ್ರ,ಚಂದ್ರಶೇಖರ ಮೋರೊ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

.