ಕೆಳ ಹಂತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಅಗತ್ಯ

ಹುಳಿಯಾರು, ಅ. ೩೧- ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ ರ ಅಡಿಯಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ “ಜಾಗೃತಿ ಸಪ್ತಾಹ – ೨೦೨೦ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಭ್ರಷ್ಟಾಚಾರ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಬಹುಮುಖ್ಯ ಅಡೆತಡೆ ಎಂದು ನಂಬಿರುತ್ತೇನೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ನಂಬಿರುತ್ತೇನೆ. ಆದ್ದರಿಂದ ನಾನು ಲಂಚವನ್ನು ಕೇಳುವುದಿಲ್ಲ, ಪಡೆಯುವುದೂ ಇಲ್ಲ, ಕೊಡುವುದೂ ಇಲ್ಲ. ಎಲ್ಲ ಕೆಲಸಗಳನ್ನು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ. ಯಾವುದೇ ಭ್ರಷ್ಟಾಚಾರದ ಪ್ರಕರಣಗಳನ್ನು ಸಂಬಂಧಪಟ್ಟ ಸಂಸ್ಥೆಗೆ ವರದಿ ಮಾಡುತ್ತೇನೆ ಎಂಬ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಿದರು.
ಎಸ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಮೋಹನ್‌ಕುಮಾರ್ ಎಂ.ಜೆ. ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಚಾರ್ಯರಾದ ಕೃಷ್ಣಮೂರ್ತಿ ಬಿಳಿಗೆರೆಯವರು ಗ್ರಾಮ ಪಂಚಾಯ್ತಿ ರಾಜಕಾರಣದ ಬಗ್ಗೆ ಮಾತನಾಡಿ, ಭ್ರಷ್ಟಾಚಾರ ಕೆಳಹಂತದಿಂದಲೇ ನಿರ್ಮೂಲನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಜ್ಞಾವಿಧಿಯಲ್ಲಿ ಎಸ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಫರ್ಹಾನಾಜ್, ಆರ್.ಶಿವಯ್ಯ, ಡಾ. ಲೋಕೇಶ್‌ನಾಯ್ಕ್, ಆರ್.ವಲಿ, ಡಾ. ಸುಷ್ಮಾ ಬಿರಾದಾರ್, ಖಲೀಲ್, ಅಧೀಕ್ಷಕರಾದ ಪುಟ್ಟಲಿಂಗಪ್ಪ, ರಮೇಶ್ ಭಾಗವಹಿಸಿದ್ದರು.