ಕೆಳವರ್ಗದವರು ಭವಿಷ್ಯ ನುಡಿಯುತ್ತಾರೆಂದು ನಿರೂಪಿಸಿದ್ದೇನೆ

ಲಿಂಗಸುಗೂರು,ಮೇ.೨೨-
ಭವಿಷ್ಯ ನುಡಿಯುವುದು ಕೇವಲ ಮೇಲ್ವರ್ಗದವರು ಮಾತ್ರ ಎಂದು ನಂಬಿಕೊಂಡಿರುವ ಈ ದಿನಗಳಲ್ಲಿ ಕೆಳವರ್ಗದವರು ಸಹ ಭವಿಷ್ಯ ನುಡಿಯಲು ಸಾಧ್ಯವೆಂಬುವುದನ್ನು ನಿರೂಪಿಸಿದ್ದೇನೆಂದು ಸಂಪಾದಕರು ಹಾಗೂ ಪಾರಂಪರಿಕ ವೈದ್ಯರಾದ ಡಾ.ಜಲಾಲುದ್ದೀನ್ ಅಕ್ಬರ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅದರಲ್ಲಿಯೂ ಕಲ್ಯಾಣ ಕರ್ನಾಟಕದಲ್ಲಿ ಕೆಳವರ್ಗದವರು ಭವಿಷ್ಯ ಹೇಳಲು ಹೇಗೆ ಸಾಧ್ಯವೆಂದವರಿಗೆ ಭವಿಷ್ಯವನ್ನು ಹೇಳಿ, ಅದು ನಿಜವಾಗಿರುವುದನ್ನು ನಿರೂಪಿಸುವುದರ ಮೂಲಕ ತಕ್ಕ ಉತ್ತರವನ್ನು ನೀಡಿದ್ದೇನೆ. ಡಾ.ರಾಜಕುಮಾರ್‌ರವರು ವೀರಪನ್‌ನಿಂದ ಇಂತಹ ದಿನವೇ ಬಿಡುಗಡೆಯಾಗುತ್ತಾರೆಂದು ಭವಿಷ್ಯ ನುಡಿದದ್ದು, ನಿಜವಾಗಿದೆ. ಅದೇ ರೀತಿ ಸದ್ದಾಂಹುಸೇನ್‌ರ ಬಗ್ಗೆ ಭವಿಷ್ಯ ಹೇಳಿರುವುದು ನಿಜವಾಗಿದೆ. ಇದಲ್ಲದೇ ದೇವೆಗೌಡರೂ ಪ್ರಧಾನ ಮಂತ್ರಿಯಾಗುತ್ತಾರೆಂದು ಭವಿಷ್ಯ ನುಡಿದಿರುವುದು ನಿಜವಾಗಿದೆ.
೨೦೨೩ರ ಚುನಾವಣೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ ಹಾಗೂ ಲಿಂಗಸುಗೂರು ಕ್ಷೇತ್ರದಲ್ಲಿ ಮಾನಪ್ಪ ವಜ್ಜಲ್ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದು ಸಹ ನಿಜವಾಗಿದೆ. ಕಳೆದ ೩೦-೩೫ ವರ್ಷಗಳ ಅವಧಿಯಲ್ಲಿ ನಾನು ನುಡಿದಿರುವ ಭವಿಷ್ಯಗಳೆಲ್ಲವೂ ನಿಜವಾಗಿವೆ. ಯಾವುದೇ ವಿದ್ಯೆಯಾಗಲಿ ಯಾರೊಬ್ಬರ ಸೊತ್ತು ಅಲ್ಲ ಎಂಬುವುದನ್ನು ನಿರೂಪಿಸಿದ್ದೇನೆ,
ನಿನ್ನೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಮೀರ್ ಅಹ್ಮದ್‌ರವರು ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದನ್ನು ಈ ಸಂದರ್ಭದಲ್ಲಿ ಖಂಡಿಸುತ್ತೇನೆ ಎಂದರು.
ಈ ವೇಳೆ ವೀರಭದ್ರಯ್ಯ ಸ್ವಾಮಿ ವಸ್ತ್ರ, ಡಾ|| ಜಾವೀದ್, ಸುಭಾಷ್ ಸಿಂಗ್ ಹಾಗೂ ಹೈಮದ್ ಅಲಿ ಉಪಸ್ಥಿತರಿದ್ದರು.