ಕೆಳಭಾಗದ ಕಾಲುವೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಃ ಎನ್.ಎಸ್.ಬೋಸರಾಜು

ಸಿರವಾರನಲ್ಲಿ ಜ.೧೫ ರಂದು ಬೃಹತ್ ಪ್ರತಿಭಟನೆ
ಮಾನ್ವಿ.ಜ.೧೪- ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಬರುವ ಮಾನ್ವಿ, ಸಿರವಾರ ಹಾಗೂ ಕೆಳಭಾಗದ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಹರಿಸುವಲ್ಲಿ ದಿವ್ಯ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ದ ಜ.೧೫ ರಂದು ಸಿರವಾರ ತಹಸೀಲ್ ಕಚೇರಿ ಮುಂದೆ ಕಾಂಗ್ರೇಸ್ ಪಕ್ಷವು ರೈತರೂಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಎಂಎಲ್‌ಸಿ, ಎಐಸಿಸಿ ಉಪಾಧ್ಯಕ್ಷ ಎನ್.ಎಸ್.ಭೋಸರಾಜ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಕಳೆದ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಎಡದಂಡೆ ಕಾಲುವೆಗಳಿಗೆ ನೀರು ಹರಿಬಿಡದೆ ರೈತರೂಂದಿಗೆ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಕೆಳಭಾಗದ ರೈತರು ಬೆಳೆದಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರು ಲಭಿಸಲು ೩೮೦೦ ರಿಂದ ೪ ಸಾವಿರ ಕ್ಯೂಸೆಕ್ ನೀರು ಬಿಡಬೇಕು. ಆದರೆ ಅಧಿಕಾರಿಗಳ ಬೇಜವಬ್ದಾರಿತನದಿಂದಾಗಿ ಕೇವಲ ೩೨೧೦ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಡದಂಡೆ ಕಾಲುವೆ ೬೯ ರಲ್ಲಿ ೯೫೦ ಕ್ಯೂಸೆಕ್ ನೀರಿನ ಪ್ರಮಾಣ ಇರುವಂತೆ ಕಾಯ್ದುಕೊಳ್ಳಬೇಕಿದೆ ಆದರೆ ೬೩೫ ಕ್ಯೂಸೆಕ್ ನೀರು ಕಂಡು ಬರುತ್ತಿದ್ದು ಇದಕ್ಕೆಲ್ಲಾ ಮೇಲ್ಬಾಗದಲ್ಲಿ ಆಕ್ರಮ ನೀರಾವರಿ ಪ್ರಮುಖ ಕಾರಣವಾಗಿದೆ. ರಾಜ್ಯ ಸರ್ಕಾರ ಕೂಡಾ ಬರೀ ಬಾಯಿ ಮಾತಿನಲ್ಲಿ ಆಕ್ರಮ ನೀರಾವರಿಗೆ ತಡೆ ಒಡ್ಡುವುದಾಗಿ ಹೇಳುತಿದೆ ವಿನಃ ಇದುವರೆಗೂ ಆಕ್ರಮ ನೀರಾವರಿ ಬಳಕೆದಾರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವೇ ಕೆಳಭಾಗದ ರೈತರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಭೋಸರಾಜ್ ಅವರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಎಡದಂಡೆ ನಾಲೆಯ ಮೇಲ್ಬಾಗದ ರೈತರು ೬ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಆಕ್ರಮವಾಗಿ ಬಳಸಿಕೊಳ್ಳುತ್ತಿರುವುದರಿಂದ ಮಾನ್ವಿ ತಾಲೂಕಿನ ೭೬,೮೨,೮೫,೮೯ ಸೇರಿದಂತೆ ಇತರೆ ಕಾಲುವೆಗಳ ಭಾಗದ ರೈತರು ನೀರಿಗಾಗಿ ಹೋರಾಟ ನಡೆಸುವಂತಹ ದುಸ್ಥಿತಿ ಎದುರಾಗಿದೆ. ಕೆಳಭಾಗದ ರೈತರಿಗೆ ಸಮರ್ಪಕವಾಗಿ ಕಾಲುವೆ ನೀರು ದೊರಕಿಸಿಕೂಡುವವರೆಗೂ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಶುಕ್ರವಾರದಂದು ಸಿರವಾರನಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಭೋಸರಾಜ್ ತಿಳಿಸಿದರು.
ಈ ವೇಳೆ ಮಾಜಿಶಾಸಕ ಹಂಪಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಮುಖಂಡರಾದ ದೊಡ್ಡಬಸ್ಸಪ್ಪಗೌಡ ಭೋಗಾವತಿ, ಬಿ.ಕೆ.ಅಮರೇಶಪ್ಪ, ರಾಜಾವಸಂತನಾಯಕ, ಶರಣಪ್ಪನಾಯಕ ಗುಡದಿನ್ನಿ, ವೀರಭದ್ರಗೌಡ ಭೋಗಾವತಿ, ಚನ್ನಬಸವ ಬೆಟ್ಟದೂರು, ಮಹಾಂತೇಶಸ್ವಾಮಿ ರೌಡುರು, ಜಿ.ನಾಗರಾಜ, ಶಿವಶಂಕರಗೌಡ ಬಾಗಲವಾಡ, ಕೆ.ಶುಕಮುನಿ, ಹನುಮೇಶ ಮದ್ಲಾಪುರು, ನರಸಿಂಹನಾಯಕ ಕರಡಿಗುಡ್ಡ, ಸಮದಾನಿನಾಯ್ಕ್ ಇದ್ದರು.