ಕೆಲಸ ಸಿಗದೆ ಯುವಕರಲ್ಲಿ ಹತಾಶೆ: ವರುಣ್

ನವದೆಹಲಿ.ಡಿ೩: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ ಉಂಟಾಗಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಉದ್ಯೋಗವಕಾಶಗಳ ಕೊರತೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಯುವಕರು ಇಂದಿಗೂ ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸರ್ಕಾರ ಮೊದಲಿಗಿಂತಲೂ ಕಡಿಮೆ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಎಂದು ಹೇಳಿದ್ದಾರೆ.
ಮೊದಲೇ ಸರ್ಕಾರಿ ಉದ್ಯೋಗಗಳ ಅಭಾವವಿದೆ. ಅದರಲ್ಲೂ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗುವ ಘಟನೆಗಳ ಹಿನ್ನೆಲೆ ಪದೇ ಪದೇ ಪರೀಕ್ಷೆಗಳನ್ನು ಮಂದೂಡಲಾಗುತ್ತದೆ. ೧.೨೫ ಕೋಟಿ ಯುವಕರು ರೈಲ್ವೆ ಇಲಾಖೆ ನಡೆಸಿದ ಗ್ರುಪ್-ಡಿ ಪರೀಕ್ಷೆ ಫಲಿತಾಂಶಗಳಿಗಾಗಿ ೨ ವರ್ಷಗಳಿಂದ ಕಾಯುತ್ತಿದ್ದಾರೆ. ಇನ್ನೆಷ್ಟು ದಿನ ಯುವಕರು ಹೀಗೆ ತಾಳ್ಮೆ ಹೊಂದಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ರೈತ ಹೋರಾಟಕ್ಕೆ ಬಿಜೆಪಿ ಸಂಸದ ವರುಣ್ ಗಾಂಧಿ ಬೆಂಬಲ ಘೋಷಿಸಿ ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆದಿದ್ದರು. ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ೧ ಕೋಟಿ ಪರಿಹಾರ ನೀಡಿ, ಸಾಂತ್ವನ ಹೇಳಬೇಕು ಎಂದು ಆಗ್ರಹಿಸಿ ವರುಣ್ ಗಾಂಧಿ, ಮೋದಿಗೆ ಪತ್ರ ಬರೆದಿದ್ದರು.