ಕೆಲಸ ಮಾಡಿ ಇಲ್ಲವಾದರೆ ಮನೆಗೆ ಹೋಗಿ: ಎ.ಸಿ ಎಚ್ಚರಿಕೆ

ಅಫಜಲಪುರ:ಜೂ.20: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿಸ್ತು ಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದರೆ ಕೆಲಸ ಬಿಟ್ಟು ಮನೆಗೆ ಹೋಗಿ ಎಂದು ಕಲಬುರ್ಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಮಮತಾ ಕುಮಾರಿ ಎಚ್ಚರಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮರಳು ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟುವಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಹೀಗಾಗಿ ನೀವು ಕಾಟಾಚಾರಕ್ಕಾಗಿ ಸಭೆಗೆ ಹಾಜರಾಗಬೇಡಿ ಕೆಲಸ ಮಾಡಿ ಅದರ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ತಾಕೀತು ನೀಡಿದರು.

ಕೂಡಲೇ ಪಿ.ಡಬ್ಲ್ಯೂ.ಡಿ ಇಲಾಖೆಯ ಅಧಿಕಾರಿಗಳು ಚವಡಾಪುರ ಮತ್ತು ಮಾಶಾಳ ಚೆಕ್ ಪೆÇೀಸ್ಟ್ ಗಳಲ್ಲಿ ಸಿ.ಸಿ ಕ್ಯಾಮೆರಾ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಂದಾಯ ಇಲಾಖೆಯ ಸುಪರ್ದಿಗೆ ನೀಡಬೇಕು ಎಂದು 15 ದಿನಗಳ ಗಡುವು ನೀಡಿದರು.

ಅಲ್ಲದೇ ರಾತ್ರಿ ಹೊತ್ತು ತಹಸೀಲ್ದಾರರು, ಪೆÇಲೀಸ್ ಅಧಿಕಾರಿಗಳು, ತಾ.ಪಂ ಇಓ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳು, ಕಂದಾಯ ನಿರೀಕ್ಷಕರು, ಪಿ.ಡಿ.ಓ ಗಳು, ಗ್ರಾಮ ಲೆಕ್ಕಿಗರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿ ಹೊತ್ತು ಗಸ್ತು ನಡೆಸಬೇಕು ಮತ್ತು ಅಕ್ರಮ ಮರಳುಗಾರಿಕೆ ವಾಹನಗಳು ಕಂಡು ಬಂದರೆ ಅಥವಾ ಅಕ್ರಮವಾಗಿ ಯಾವುದಾದರೂ ಸ್ಥಳದಲ್ಲಿ ಮರಳು ಸಂಗ್ರಹವಾಗಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಅಲ್ಲದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಾಯಲ್ಟಿ(ರಾಯಧನ) ಮುಖಾಂತರ ಸರ್ಕಾರ ನಿಗದಿಪಡಿಸುವ ಶುಲ್ಕದಂತೆ ಮುಂಬರುವ ದಿನಗಳಲ್ಲಿ ಮರಳುಗಾರಿಕೆಗೆ ಅನುಮತಿ ನೀಡಬೇಕು ಮತ್ತು ಈಗಾಗಲೇ ಪ್ರಕರಣ ದಾಖಲಿಸಿ ಸಂಗ್ರಹವಾಗಿರುವ ಮರಳನ್ನು ರಾಯಲ್ಟಿ ಮೂಲಕ ವಿಲೇವಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಇನ್ನು ಮುಂದೆ ಯಾರೂ ಸಹ ಕಾಟಾಚಾರಕ್ಕೆ ಸಭೆಗೆ ಹಾಜರಾಗದೆ ಪೂರಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಇಲ್ಲವಾದರೆ ನಿಮ್ಮ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಮುನ್ನೆಚ್ಚರಿಕೆ ನೀಡಿದರು.

ಈ ವೇಳೆ ತಹಸೀಲ್ದಾರ್ ಸಂಜೀವಕುಮಾರ್ ದಾಸರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.