ಕೆಲಸ ಮಾಡಿದ್ದೇವೆ ನಮಗೆ ಕೂಲಿ ಕೊಡಿ

ರಾಮನಗರ,ಏ.೧೮-ಕಾಂಗ್ರೆಸ್ ಅಧಿಕಾರ ಹಿಡಿಯುವುದಿರಲಿ, ವಿಪಕ್ಷ ಸ್ಥಾನದಲ್ಲಿ ಕೂರುವಷ್ಟೂ ಸ್ಥಾನಗಳನ್ನು ಪಡೆಯುವುದು ಅಸಾಧ್ಯ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಿ ನಿಮ್ಮ ಮತವನ್ನು ಪೋಲು ಮಾಡಿಕೊಳ್ಳಬೇಡಿ ಎಂದು ಮಾಜಿ ಉಪ ಮುಖ್ಯಮಂತಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮತದಾರರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಾಗೂ ಸ್ಥಿರ ಸರ್ಕಾರಕ್ಕೆ ಬಿಜೆಪಿಯನ್ನು ಬೆಂಬಲಿಸಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಟೀಂನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಇರಲಿಲ್ಲ. ಈ ಬಾರಿ ಆ ಕೊರತೆ ನೀಗಲಿದೆ. ಕ್ಷೇತ್ರದಾದ್ಯಂತ ಬಿಜೆಪಿ ಪರವಾದ ಅಲೆ ಇದ್ದು, ನಮ್ಮ ಅಭ್ಯರ್ಥಿ ಗೆಲ್ಲುವುದು ನೂರಕ್ಕೆ ನೂರರಷ್ಟು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಬಾರಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಅವರ ಸಾಧನೆ ಶೂನ್ಯ. ಹೀಗಾಗಿ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿ, ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನರಿತ ಡಿಕೆ ಸಹೋದರರು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹಠದಿಂದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಖರೀದಿಗೆ ಮುಂದಾಗಿದ್ದಾರೆ. ಆದರೆ, ಅವರ ತಂತ್ರ ಅವರಿಗೇ ಮುಳುವಾಗಲಿದೆ ಎಂದರು.
ದ್ವೇಷ, ದಬ್ಬಾಳಿಕೆ, ದೌರ್ಜನ್ಯ ರಾಜ-ಕಾರಣಕ್ಕೆ ಹೆಸರುವಾಸಿಯಾಗಿರುವ ಡಿಕೆ ಸಹೋದರರು ಭಂಡರು. ಕ್ಷೇತ್ರದ ಅಭಿವೃದ್ಧಿಗೆ ಎಳ್ಳಷ್ಟೂ ಕೊಡುಗೆ ನೀಡದ
ಅವರು ನಮ್ಮ ಅಧಿಕಾರಾವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮತದಾರರು ಅವರ ಸುಳ್ಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು.
ಜಿಲ್ಲೆಯ ಜನತೆಗೆ ೨೪ ತಾಸು ನೀರು ಪೂರೈಸುವ ಜಲಜೀವನ್ ಮಿಷನ್, ಬೆಂ-ಮೈ ಹೆದ್ದಾರಿ ಅಭಿವೃದ್ಧಿ, ಸತ್ತೇಗಾಲ ಏತ ನೀರಾವರಿ ಯೋಜನೆ, ಶ್ರೀರಂಗ
ಯೋಜನೆ, ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನಾವು ಮಂಜೂರು ಮಾಡಿದ್ದ ರಾಜೀವ್ ಗಾಂಧಿ ಆರೋಗ್ಯ ವಿವಿ ಯೋಜನೆಯನ್ನು ಕನಕಪುರಕ್ಕೆ ಕದ್ದೊಯ್ಯಲು ಹುನ್ನಾರ ನಡೆಸಿದವರು ಡಿಕೆ ಸಹೋದರರು ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಸರಳ, ಸಜ್ಜನ, ಪ್ರಾಮಾಣಿಕ ಹೃದಯವಂತ ಡಾ.ಮಂಜುನಾಥ್ ಪರವಾಗಿ ಜನರೇ ಚುನಾವಣೆ ನಡೆಸುತ್ತಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಅಭ್ಯರ್ಥಿ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ದೇಶಕ್ಕೆ ಕಾಂಗ್ರೆಸ್, ಗಾಂಧಿ ಕುಟುಂಬ ಮಾಡಿರುವ ಅನ್ಯಾಯವನ್ನು ಬೇರಾರೂ ಮಾಡಿರಲು ಸಾಧ್ಯವಿಲ್ಲ. ಅನ್ಯಾಯ ಮಾಡಿರುವವರೇ ಇಂದು ನ್ಯಾಯ ಯಾತ್ರೆ, ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವರ ಪಕ್ಷದವರೇ ಭಾರತವನ್ನು ಇಬ್ಭಾಗ ಮಾಡುವ ಮಾತನ್ನು ಆಡುತ್ತಿದ್ದಾರೆ. ಇಂತವರ ಕೈಗೆ ದೇಶವನ್ನು ಕೊಟ್ಟರೆ ಸುರಕ್ಷಿತವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರು ಬದುಕು ಕಟ್ಟಿಕೊಳ್ಳಲು ಅಗತ್ಯ ವಿರುವಂತಹ ಯೋಜನೆಗಳನ್ನು ನಮ್ಮ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಮೋದಿ ಅವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಭಾರತವನ್ನು ವಿಶ್ವ ಗುರುವಾಗಿಸಲು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದರು.
ಗೋಷ್ಟಿಯಲ್ಲಿ ಮುಖಂಡರಾದ ಅಶೋಕ್‌ಗೌಡ, ಗೌತಮ್‌ಗೌಡ, ಗಿರಿಗೌಡ, ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮೋಹನ್, ಚೇತನ್, ಜಯಕುಮಾರ್, ಲೀಲಾವತಿ, ಸೇರಿದಂತೆ ಹಲವರು ಇದ್ದರು.