ಕೆಲಸ ಮಾಡಿದರೂ ಬ್ಯಾಂಕ್ ಖಾತೆಗೆ ಜಮೆಯಾಗದ ಹಣ

ಕಲಬುರಗಿ,ಮಾ.12-ಜಿಲ್ಲೆಯ ಪಾಳಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಕೂಲಿ ಹಣ ವಿಳಂಬ ಹಾಗೂ ಬ್ಯಾಂಕ್ ಖಾತೆ ಕೆವೈಸಿಯ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಸತತವಾಗಿ ಮೂರು ವಾರಗಳ ಕೆಲಸ ಮಾಡಿದರು. ಕಾರ್ಮಿಕರಿಗೆ ಯಾವುದೇ ರೀತಿ ಹಣ ಬ್ಯಾಂಕ್ ಖಾತೆಗೆ ಜಮಾ ಕೂಡ ಆಗಿಲ್ಲ. ಈ ಹಿಂದೆ ಹಲವಾರು ವರ್ಷಗಳಿಂದ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಾ ನಿರಂತರವಾಗಿ ಬಂದಿರುವ ಕೂಲಿ ಕಾರ್ಮಿಕರಿಗೆ ಈ ರೀತಿಯ ಸಮಸ್ಯೆ ಕಂಡು ಬಂದಿಲ್ಲ. ಆದರೆ ಈ ಬಾರಿ ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಖಾತೆಯ ಕೆವೈಸಿ ಸಮಸ್ಯೆ ಉಂಟಾಗಿದೆ.
ಕೆಲಸ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೇಳಿದರೆ, ಯಾವುದೇ ಕೆಲಸ ಇಲ್ಲ, ಅಲ್ಲದೇ ಆಧಾರ್ ಕಾರ್ಡ್ ಬ್ಯಾಂಕ್‍ಗೆ ಲಿಂಕ್ ಆಗಿಲ್ಲ ಎನ್ನುವ ನೆಪಹೇಳಿ ಅಲೆದಾಡುವಂತೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ 100 ದಿನಗಳ ಉದ್ಯೋಗ ಒದಗಿಸುವುದರ ಜೊತೆಗೆ ವರ್ಷಕ್ಕೆ 200 ದಿನಗಳ ಕೆಲಸ ಒದಗಿಸಲಿದೆ. ಆದರೆ ಯೋಜನೆ ಜಾರಿಯಲ್ಲಿನ ಲೋಪಗಳಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಉದ್ಯೋಗ ಖಾತ್ರಿ ಯೋಜನೆಯ ಲಾಭ ಜನರಿಗೆ ದೊರಕುವಂತೆ ಮಾಡಬೇಕಿದೆ.