ಕೆಲಸ, ಕಮೀಷನ್ ಕೊಡುವುದಾಗಿ ಕಾರ್ಮಿಕರಿಂದಲೇ ಹಣ ಪಡೆದು ವಂಚನೆ : ಕಂಪನಿ ವಿರುದ್ಧ ಪ್ರತಿಭಟನೆ

ಮೈಸೂರು,ಸೆ.16:- ಐಕೋನಿವೋ ಟೈರಾಂಟೋ ಸಂಸ್ಥೆಯು ಕೆಲಸ ನೀಡುತ್ತೇವೆ ಎಂದು ಕಾರ್ಮಿಕರಿಂದ 13,000,38,000, 94,000 ಹಣ ಪಡೆದು ಒಂದು ವರ್ಷದಿಂದ ಸಂಬಳ ಹಾಗೂ ಪಡೆದ ಹಣಕ್ಕೂ ಯಾವುದೇ ಕಮಿಷನ್ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಕರುನಾಡ ಸೇನಾನಿಗಳ ವೇದಿಕೆಯ ಆಶ್ರಯದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದೆ.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಂಸ್ಥೆಯು ಕಾರ್ಮಿಕರಿಗೆ ಕೆಲಸ ನೀಡುತ್ತೇವೆ ಎಂದು ಕೆಲಸಕ್ಕೆ ಸೇರುವಾಗ ಪ್ರತಿಯೊಬ್ಬರಿಂದ 2500ರೂ.ಪಡೆದುಕೊಂಡು ನಿಮಗೆ ಮೂರ್ನಾಲ್ಕು ದಿನಗಳು ಟ್ರೈನಿಂಗ್ ನೀಡಲಾಗುವುದು ಎಂದು ತಿಳಿಸಿತ್ತು. ಮೂರ್ನಾಲ್ಕು ದಿನಗಳಲ್ಲಿ ಜನರನ್ನು ನಮ್ಮ ಸಂಸ್ಥೆಗೆ ಸೇರಲು ಪ್ರಚೋದನೆ ನೀಡಬೇಕು. ಜನರಲ್ಲಿ ಹೇಗೆ ಆಸಕ್ತಿ ಮೂಡಿಸಬೇಕು. ತಾವು ಈ ಸಂಸ್ಥೆಗೆ ಮತ್ತೊಬ್ಬರನ್ನು ಸೇರಿಸಿದರೆ ಒಬ್ಬೊಬ್ಬರಿಗೆ ಇಂತಿಷ್ಟು ಅಂತ ಕಮೀಷನ್ ರೂಪದಲ್ಲಿ ನೀವು ಹಣ ಸಂಪಾದನೆ ಮಾಡಬಹುದು ಎಂದು ಸಂಸ್ಥೆ ಕಾರ್ಮಿಕರಿಗೆ ತಿಳಿಸಿದೆ. ಅದರಂತೆ 13000,38000,94000 ಈ ಮೂರರಲ್ಲಿ ತಮಗೆ ಅನುಕೂಲಕ್ಕೆ ತಕ್ಕ ಹಾಗೆ ಹಣ ಪಾವತಿಸಿದರೆ ಆ ಹಣಕ್ಕೆ ಪ್ರತಿಯಾಗಿ ನಾವು ಪ್ಯಾಟ್ರಿನೋ ಬ್ರ್ಯಾಂಡೆಡ್ ಸಿದ್ಧ ಉಡುಪುಗಳನ್ನು ನೀಡುತ್ತೇವೆ.
ಆ ಉಡುಪುಗಳನ್ನು ನೀವು ಜನರಿಗೆ ಅಥವಾ ತಿಳಿದಿರುವ ಬಟ್ಟೆ ಅಂಗಡಿಗಳಿಗೆ ನೀಡಿ ಹೆಚ್ಚಾಗಿ ಹಣ ಸಂಪಾದನೆ ಮಾಡಬಹುದು ಎಂದಿದ್ದರು. ಕಷ್ಟಪಟ್ಟು ಓದಿ ಕೆಲಸ ಸಿಗದೆ ಕೊರೋನಾ ಮಹಾಮಾರಿಯಿಂದ ಕೆಲಸ ಸಿಗದೆ ಪರದಾಡುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಈ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಹಾಗೂ ಕಮೀಷನ್ ರೂಪದಲ್ಲಿ ಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬಹುದು ಎಂದು ಹಣವನ್ನು ಸಹ ನೀಡಿದ್ದು ಕಾರ್ಮಿಕರು ನೀಡಿದ ಹಣಕ್ಕೆ ಸಂಸ್ಥೆಯವರು ಯಾವುದೇ ರಶೀದಿ ನೀಡಿಲ್ಲ, ಕಾರ್ಮಿಕರ ಸಹಾಯಕ್ಕೆ ಜಿಲ್ಲಾಡಲಿತ ಮುಂದಾಗಬೇಕಿದ್ದು ಹಣ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ವೇದಿಕೆಯ ಸಂಸ್ಥಾಪಕ ಎಲ್.ಸೂರ್ಯನಾರಾಯಣ, ಜಿಲ್ಲಾಧ್ಯಕ್ಷ ಮಂಜು ಸೇರಿದಂತೆ ಸಂತ್ರಸ್ತರು ಪಾಲ್ಗೊಂಡಿದ್ದರು.