ಕೆಲಸದ ಹೊರೆ ೧೦೦ಕ್ಕೂ ಅಧಿಕ ಮಂದಿ ಸಾವು

ಜಕಾರ್ತ (ಇಂಡೋನೇಶ್ಯಾ), ಫೆ.೨೮- ವಿಶ್ವದ ಅತೀ ದೊಡ್ಡ ಏಕದಿನ ಚುನಾವಣೆಗೆ ಸಾಕ್ಷಿಯಾಗಿದ್ದ ಇಂಡೋನೇಶ್ಯಾದಲ್ಲಿ ಈಗಾಗಲೇ ಫಲಿತಾಂಶ ಹೊರಬಿದ್ದಿದೆ. ಈ ನಡುವೆ ಏಕದಿನ ಚುನಾವಣೆಗೆ ಸಂಬಂಧಿಸಿದಂತೆ ಆಯಾಸ ಹಾಗೂ ವಿಶ್ರಾಂತಿ ಇಲ್ಲದ ಕೆಲಸದ ಪರಿಣಾಮ ೧೧೪ಕ್ಕೂ ಚುನಾವಣಾ ಕಾರ್ಯಕರ್ತರು ಮೃತಪಟ್ಟು, ೧೫ ಸಾವಿರಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು ೯೦೦ ಕಾರ್ಮಿಕರು ಸಾವನ್ನಪ್ಪಿದರು.
ಫೆಬ್ರವರಿ ೧೦ ರಿಂದ ೨೬ ರವರೆಗೆ ನಡೆದ ಚುನಾವಣಾ ಅವಧಿಯಲ್ಲಿ ಒಟ್ಟು ೧೧೫ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಯಾಸದ ಪರಿಣಾಮ ಇವೆಲ್ಲರೂ ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ ಹೆಚ್ಚಿನವರು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಗಳು ಸೇರಿದಂತೆ ಬಳಲಿಕೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಸುಮಾರು ೬೦% ರಷ್ಟು ೪೧ ರಿಂದ ೬೦ ವರ್ಷ ವಯಸ್ಸಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥರಾಗಿರುವ ಸುಮಾರು ೧೫,೦೦೦ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚುನಾವಣಾ ದಿನದಂದು ದೇಶಾದ್ಯಂತ ಸುಮಾರು ೮,೦೦,೦೦೦ಕ್ಕೂ ಅಧಿಕ ಮತದಾನ ಕೇಂದ್ರಗಳಲ್ಲಿ ಸುಮಾರು ೫೭ ಲಕ್ಷ ಜನರನ್ನು ೧೨ ಗಂಟೆಗಳಿಗೂ ಹೆಚ್ಚು ಅವಧಿಯ ಪಾಳಿಯಲ್ಲಿ ಕೆಲಸ ಮಾಡಿದ್ದರು. ಏಕದಿನ ಚುನಾವಣೆ ಹಿನ್ನೆಲೆಯಲ್ಲಿ ಕೆಲಸದ ಅವಧಿಯು ೧೨ ಗಂಟೆಯಿಂದ ೨೬ ಗಂಟೆವರೆಗೂ ವಿಸ್ತರಣೆಯಾಗಿದ್ದ ಹಿನ್ನೆಲೆಯಲ್ಲಿ ಹಲವರು ಕಾರ್ಮಿಕರು ತೀವ್ರ ರೀತಿಯಲ್ಲಿ ಆಯಾಸಕ್ಕೀಡಾಗಿದ್ದರು. ಅಲ್ಲದೆ ಮೃತರಲ್ಲಿ ಹೆಚ್ಚಿನವರು ಈಗಾಗಲೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಹೊಂದಿದ್ದರು ಎನ್ನಲಾಗಿದೆ. ಮತದಾರರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾತ್ರವಲ್ಲದೆ ಶಾಸಕಾಂಗ ಸದಸ್ಯರು ಮತ್ತು ಸೆನೆಟರ್‌ಗಳನ್ನು ಒಂದೇ ದಿನದಲ್ಲಿ ಆಯ್ಕೆ ಮಾಡಿದ್ದು, ಹಾಗಾಗಿ ದೇಶದ ಚುನಾವಣಾ ವ್ಯವಸ್ಥೆಯು ಚುನಾವಣಾ ಕಾರ್ಯಕರ್ತರ ಮೇಲೆ ಹೆಚ್ಚಿನ ಹೊರೆಯನ್ನು ಹಾಕಿದೆ ಎಂದು ತಜ್ಞರು ತಿಳಿಸಿದ್ದಾರೆ.