ಕೆಲಸದ ಜತೆಗೆ ಆರೋಗ್ಯ ಸೇವೆ: ಉಸ್ಮಾನ್ ಗನಿ

ಜೇವರ್ಗಿ :ಜೂ.3: ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದರ ಜತೆಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಸ್ಮಾನ್ ಗನಿ ಅಭಿಪ್ರಾಯ ಪಟ್ಟರು.
ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಯೂರ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಮೃತ್ ಅಭಿಯಾನದಡಿ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ ಸಹಯೋಗದಲ್ಲಿ ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದುಡಿಮೆಯ ಜತೆಗೆ ಆರೋಗ್ಯ ಕಡೆ ಹೆಚ್ಚು ಕಾಳಜಿ ಇರಬೇಕು. ಈ ದಿಸೆಯಲ್ಲಿ ಸರ್ಕಾರ ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಯೋಜನೆ ಕೂಲಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ.ಆದ್ದರಿಂದ ಎಲ್ಲರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೇರಟಗಿ ಪ್ರಾಥಮಿಕ ಆರೋಗ್ಯ ಇಲಾಖೆ ಸಿ.ಹೆಚ್.ಒ ದಯಾರುಲ್, ಸ್ಟಾಫ್ ನರ್ಸ್ ಕಾವೆರಿ, ತಾ.ಪಂ ಐಇಸಿ ಸಂಯೋಜಕ ಚಿದಂಬರ ಪಾಟೀಲ, ಕೆ.ಹೆಚ್.ಪಿ.ಪಿ.ಟಿ ತಾ.ಸಂ. ರಾಘವೇಂದ್ರ, ಗ್ರಾ.ಪಂ ಸಿಬ್ಬಂದಿಗಳು ಮತ್ತು ಕೂಲಿಕಾರ್ಮಿಕರು ಭಾಗವಹಿಸಿದ್ದರು..