ಕೆಲಸದ ಆಮಿಷವೊಡ್ಡಿ ಅಪ್ರಾಪ್ತೆಯನ್ನು ಮುಂಬೈಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಕಲಬುರಗಿ:ನ.22: ಅಪ್ರಾಪ್ತೆಯನ್ನು ಮುಂಬೈಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, 12 ವರ್ಷದ ಬಾಲಕಿಯನ್ನು ಸಹ ರಕ್ಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಮೂಲದ ವಿವೇಕ್ ಎಂಬಾತ ಬೆಂಗಳೂರಿನ ಕ್ಯಾಂಟೀನ್‌ವೊಂದರಲ್ಲಿ ತರಕಾರಿ ಕಟಿಂಗ್ ಕೆಲಸ ಮಾಡುತ್ತಿದ್ದ ಬಾಲಕಿಗೆ ಕೆಲಸದ ಆಮಿಷವೊಡ್ಡಿದ್ದನಂತೆ. ಅಲ್ಲದೇ ದೆಹಲಿಯಲ್ಲಿ ಹೆಚ್ಚಿನ ಹಣ ಗಳಿಸಬಹುದು. ತನ್ನೊಂದಿಗೆ ಬಂದರೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಪುಸಲಾಯಿಸಿದ್ದಾನೆ.
ಇದನ್ನು ನಂಬಿದ ಬಾಲಕಿಯ ಮನೆಯವರು ಆಕೆಯನ್ನು ಈತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ವಿವೇಕ್ ಆಕೆಯನ್ನು ದೆಹಲಿಗೆ ಕರೆದೊಯ್ಯುವ ಬದಲು ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದ.ಮಾರ್ಗಮಧ್ಯೆ ಅನುಮಾನಗೊಂಡ ಬಾಲಕಿ ಕಲಬುರಗಿ ಸಮೀಪಿಸುತ್ತಿದ್ದಂತೆ ವಿವೇಕ್​ನೊಂದಿಗೆ ತಗಾದೆ ತೆಗೆದಿದ್ದಾಳೆ.
ಈ ವೇಳೆ ವಿವೇಕ್​ ದೆಹಲಿ ಬೇಡ ಮುಂಬೈಗೆ ಹೋಗೋಣವೆಂದು ಸಮಜಾಯಿಷಿ ಕೊಡಲು ಯತ್ನಿಸಿದನಂತೆ. ಆದರೆ ಆತನೊಂದಿಗೆ ಜಗಳವಾಡಿದ ಬಾಲಕಿ, ಕಲಬುರಗಿ ರೈಲು ನಿಲ್ದಾಣದಲ್ಲಿ ಇಳಿದಳು. ಆ ಬಳಿಕ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿ, ವಿಚಾರಿಸಿದ ಸಾರ್ವಜನಿಕರು ಚೈಲ್ಡ್ ಲೈನ್ ಅಧಿಕಾರಿಗಳ ಗಮನಕ್ಕೆ ತಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಆದರೆ ವಿವೇಕ್, ತಾನು ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕೆಯ ಮನೆಯವರೇ ಕೆಲಸ ಕೊಡಿಸು ಅಂತ ಹೇಳಿ ತನ್ನ ಜೊತೆ ಕಳಿಸಿದ್ದಾರೆ. ಆಕೆಯನ್ನು ಕೆಲಸ ಕೊಡಿಸಲು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.
ದಾರಿಮಧ್ಯೆ, ತಾನು ಬರುವುದಿಲ್ಲ ಎಂದು ಬಾಲಕಿ ಹಠ ಹಿಡಿದಿದ್ದಾಳೆ. ಹೀಗಾಗಿ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದೇನೆ. ಆದರೆ ಈ ಬಾಲಕಿ ತನ್ನೊಂದಿಗೆ ಜಗಳವಾಡಿದ್ದಾಳೆ. ಆಕೆಯನ್ನು ಅಕ್ರಮವಾಗಿ ಸಾಗಿಸುತ್ತಿರಲಿಲ್ಲ. ಅವರ ಮನೆಯವರ ಒಪ್ಪಿಗೆ ಮೇರೆಗೆ ಆಕೆಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ವಿವೇಕ್ ಹೇಳಿದ್ದಾನೆ.
ಅಧಿಕಾರಿಗಳು ಈ ಪ್ರಕರಣದ ಹಿಂದೆ ಮಾನವ ಕಳ್ಳಸಾಗಣೆಯ ದೊಡ್ಡ ಜಾಲ ಇರಬಹುದು. ವಿವೇಕ್​ ದಲ್ಲಾಳಿಯಾಗಿರಬಹುದು ಎಂದು ರೈಲ್ವೆ ಚೈಲ್ಡ್ ಹೆಲ್ಪ್‌ ಡೆಸ್ಕ್ ಸಂಯೋಜಕ ಅಶೋಕ್​ ಶಂಕೆ ವ್ಯಕ್ತಪಡಿಸಿದ್ದಾರೆ‌.
ಆರೋಪಿ ವಿವೇಕ್​ನನ್ನು ವಶಕ್ಕೆ ಪಡೆದ ವಾಡಿ ರೈಲ್ವೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.