ಕೆಲಸದ ಅವಧಿ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಪ್ರತಿಭಟನೆ

ಕಲಬುರಗಿ:ಫೆ.28:ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿರುವುದು ಹಾಗೂ ಅನೇಕ ಕಾರ್ಮಿಕರ ಸೌಲಭ್ಯಗಳನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾರ್ಚ್ 2ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಶೋಕ್ ಘೂಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಮಸೂದೆ ಜಾರಿಗೊಳಿಸಿ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ವಿಸ್ತಾರಗೊಳಿಸಿದ ರಾಜ್ಯ ಸರ್ಕಾರದ ನೀತಿ ಖಂಡನಾರ್ಹ ಎಂದರು.
ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸವನ್ನು ಮಾಡುವ ಕಾನೂನು ಜಾರಿಗೊಳಿಸುವ ಮೂಲಕ ಮಾನವೀಯತೆಯನ್ನು ಮರೆಯುತ್ತಿದೆ ಎಂದು ಆರೋಪಿಸಿದ ಅವರು, ಐಟಿ, ಬಿಟಿ ಹಾಗೂ ಅನೇಕ ಉದ್ಯೋಗಪತಿಗಳ ಕೈಗೊಂಬೆಯಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲ ರಂಗದ ಕಾರ್ಮಿಕ ವರ್ಗದವರು ಸಿಡಿದೇಳುವ ಸಮಯ ಬಂದಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸದ ಸಮಯವನ್ನು 8 ಗಂಟೆಯಿಂದ 12 ಗಂಟೆಯವರೆಗೆ ಜಾರಿಗೊಳಿಸಿದ ರಾಜ್ಯ ಸರ್ಕಾರದ ನೀತಿ ವಿರುದ್ಧ ಪ್ರತಿಭಟಿಸಬೇಕು. ಆ ಹಿನ್ನೆಲೆಯಲ್ಲಿ ಮಾರ್ಚ್ 2ರಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೆಳಿಗ್ಗೆ 10-30ಕ್ಕೆ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಮಿಕರಿಗೆ 8 ಗಂಟೆಗಳ ಕೆಲಸ ಮಾಡುವ ಕಾನೂನು ಪುನರ್ ಪ್ರಾರಂಭಿಸುವಂತೆ, ಮಹಿಳೆಯರ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವ ಕಾನೂನು ವಾಪಸ್ಸು ಪಡೆಯುವಂತೆ, ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಸಿಮೆಂಟ್ ವೇಜ್ ಬೋರ್ಡ್ ಪ್ರಕಾರ ವೇತನವನ್ನು ಜಾರಿಗೊಳಿಸುವಂತೆ, ಕನಿಷ್ಠ 22 ದಿನಗಳ ಕಾಲ ಕೆಲಸವನ್ನು ಕೊಡುವಂತೆ, ಜಿಲ್ಲೆಯಲ್ಲಿ ಮುಚ್ಚಲ್ಪಟ್ಟ ಶಹಾಬಾದ್ ಜಿಇ ಪವರ್ ಇಂಡಿಯಾ ಲಿಮಿಟೆಡ್, ಶಹಾಬಾದ್ ಜೆಪಿ ಸಿಮೆಂಟ್, ಕುರಕುಂಟಾ ಸಿಸಿಐ ಕಾರ್ಖಾನೆಗಳನ್ನು ಪುನರಾರಂಭಿಸುವಂತೆ ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಹುರಾಷ್ಟ್ರೀಯ ಕಾರ್ಖಾನೆಯಲ್ಲಿ ಸಿಗುವ ಸೌಲಭ್ಯಗಳನ್ನು ಜಾರಿಗೊಳಿಸುವಂತೆ, ಕಟ್ಟಡ ಕಾರ್ಮಿಕರಿಗೆ ಸಿಗುವ ಟೂಲ್ ಕಿಟ್, ಸ್ಕೂಲ್ ಕಿಟ್, ಲ್ಯಾಪ್‍ಟಾಪ್, ಬಸ್ಸಿನ ಪಾಸ್ ಕೂಡಲೇ ವಿಲೇವಾರಿ ಮಾಡುವಂತೆ, ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದಂತೆ ಮದುವೆ, ಹೆರಿಗೆ, ವೈದ್ಯಕೀಯ ಸೌಲಭ್ಯ ಹಾಗೂ ಮರಣ ಹೊಂದಿದ ಪರಿಹಾರ ಧನ ಶೀಘ್ರವಾಗಿ ಪಾವತಿಸುವಂತೆ, ಇಪಿಎಸ್-95 ಪ್ರಕಾರ ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಸುಪ್ರಿಂಕೋರ್ಟ್ ಜಾರಿಗೊಳಿಸಿದ ಪಿಂಚಣಿಗೆ ಕೂಡಲೇ ಜಾರಿಗೊಳಿಸುವಂತೆ, ಜಿಲ್ಲೆಯಲ್ಲಿರುವ ಇಂದಿರಾ ಕ್ಯಾಂಟಿನ್ ಪುನರಾರಂಭಿಸುವಂತೆ ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದು ಜಾಧವ್, ಮಲ್ಲಿಕಾರ್ಜುನ್ ಎಸ್. ಮಾಳಗೆ, ಮೀರಜ್ ಕಲ್ಯಾಣವಾಲಾ, ಶಿವಲಿಂಗ್ ಸಾವಳಗಿ, ಸಂಜೀವಕುಮಾರ್ ಗುತ್ತೇದಾರ್, ವಿನೋದ್ ಎಲ್. ಚವ್ಹಾಣ್, ಪಾರ್ವತಿ ಕಾರಭಾರಿ ಮುಂತಾದವರು ಉಪಸ್ಥಿತರಿದ್ದರು.