ಕೆಲಸಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ ರಕ್ಷಣೆ: ಬೊಮ್ಮಾಯಿ


ಹುಮಾನಾಬಾದ್, ಏ. ೮- ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜಬೊಮ್ಮಾಯಿ ಹೇಳಿದರು.
ದರ್‌ನ ಹುಮಾನಾಬಾದ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಭದ್ರತೆ ನೀಡುವುದು ನಮ್ಮ ಕೆಲಸ. ಅದರಂತೆ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಕೆಲಸಕ್ಕೆ ಹಾಜರಾಗುವ ನೌಕರರಿಗೆ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಸಾರಿಗೆ ಮುಷ್ಕರದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ಕಣ್ಣಿಗೆ ಕಾಣುತ್ತಿದೆ. ಜನ ಪರಿತಪಿಸುತ್ತಿದ್ದಾರೆ. ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಸಾರಿಗೆ ಸಂಸ್ಥೆ ಉಳಿಯಬೇಕು, ನೌಕರರಿಗೂ ಒಳ್ಳೆಯ ಸಂಬಳ ಸಿಗಬೇಕು ಎಂದರೆ ಅದು ದುಡಿಮೆಯಿಂದ ಸಾಧ್ಯ ದುಡಿಮೆ ಇಲ್ಲದೆ ಇವೆಲ್ಲಾ ಅಸಾಧ್ಯ ಎಂದು ಅವರು ಹೇಳಿದರು.
ಮುಷ್ಕರನಿರತರ ಸಾರಿಗ ಸಂಸ್ಥೆಯ ನೌಕರರಿಗೆ ಮಾನವೀಯತೆಯಿಂದ ಕಳಕಳಿಯ ಮನವಿ ಮಾಡುತ್ತೇನೆ. ಕೆಲಸಕ್ಕೆ ಹಾಜರಾಗಿ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅವರು ಹೇಳಿದರು.