ಕೆಲಸಕ್ಕೆ ಹಾಜರಾಗಿ ಸಾರಿಗೆ ನೌಕರರಿಗೆ ಸಿಎಂ ಮನವಿ

ಬೆಂಗಳೂರು, ಏ. ೯- ರಾಜ್ಯ ಸಾರಿಗೆ ನೌಕರರು ಹಠಬಿಟ್ಟು ಕರ್ತವ್ಯಕ್ಕೆ ಮರಳಿ, ಯಾರದೋ ಮಾತುಕೇಳಿ ಬಲಿಪಶುಗಳಾಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮುಷ್ಕರ ಕೈಬಿಟ್ಟು, ಕೆಲಸಕ್ಕೆ ಹಾಜರಾಗುವ ತನಕ ಮಾತುಕತೆಗೆ ಸರ್ಕಾರ ಸಿದ್ಧವಿಲ್ಲ. ಜನ ಕಷ್ಟದಲ್ಲಿರುವಾಗ ನೌಕರರು ಹಠಮಾರಿತನ ಪ್ರದರ್ಶಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ, ರಾಜ್ಯಾದ್ಯಂತ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸಾರಿಗೆ ನೌಕರರ ೧೦ ಬೇಡಿಕೆಗಳ ಪೈಕಿ ೮ ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಡೇರಿಸಿರುವ ಬೇಡಿಕೆಗಳಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸೋಣ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ೬ನೇ ವೇತನ ಆಯೋಗ ಜಾರಿಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗೆ ನಷ್ಟವಾಗುವ ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.