
ಹೈದರಾಬಾದ್,ಅ.೨೪-ಒಂದೇ ಒಂದು ಗೆಲುವಿಗೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಚಿತ್ರ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಗೆ ಸೇರಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ.
’ಕೆಜಿಎಫ್’ ಶೈಲಿಯಲ್ಲೇ ಈ ಚಿತ್ರವೂ ಇರಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮತ್ತೊಂದೆಡೆ ಈ ಸಿನಿಮಾ ಮೇನಿಯಾ ಅಮೆರಿಕದಲ್ಲಿ ಶುರುವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ’ಸಾಲಾರ್’ ಮುಂಗಡ ಬುಕ್ಕಿಂಗ್ ಈಗಷ್ಟೇ ಆರಂಭವಾಗಿದೆ. ಟಿಕೆಟ್‌ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್ ಗಳನ್ನು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ನೋಡಿದರೆ ವಿದೇಶದಲ್ಲಿ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಈ ಸಿನಿಮಾದ ಪ್ರಚಾರ ಶುರುವಾಗಿದೆ.
ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ ಎಲ್ಲರಿಗೂ ಗೊತ್ತಿರುವ ವಿಚಾರ. ಕೆಜಿಎಫ್ ಮತ್ತು ಕೆಜಿಎಫ್ ೨ ನಂತಹ ಸೂಪರ್‌ಹಿಟ್ ಚಿತ್ರಗಳನ್ನು ಬರೆದು ನಿರ್ದೇಶಿಸಿದ ಅದೇ ನಿರ್ದೇಶಕ ಪ್ರಶಾಂತ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.
ಈ ಕಾರಣಕ್ಕೆ ಕೆಜಿಎಫ್ ಜೊತೆ ‘ಸಾಲಾರ್’ ಕಥೆಯ ಲಿಂಕ್ ಇರಬಹುದು ಎಂದು ಹೇಳಲಾಗುತ್ತಿದೆ. ಚಿತ್ರವು ಸೆಪ್ಟೆಂಬರ್ ೨೮ ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಎಂದು ಪ್ರಶಾಂತ್ ಅವರ ಹಳೆಯ ದಾಖಲೆ ಹೇಳುತ್ತಿದೆ.