ಕೆರೆ ಹೂಳೆತ್ತುವ ಕಾರ್ಯ ಅವೈಜ್ಞಾನಿಕ: ವಿಶ್ವನಾಥ ಪಟ್ಟಿ


ರಾಯಚೂರು, ಜೂ.೬- ನಗರದ ಮಾವಿನಕೆರೆ ಅಭಿವೃದ್ಧಿ ಹೂಳೆತ್ತುವ ಕಾಮಗಾರಿಗೆ ಮಳೆಗಾಲದಲ್ಲಿ ಚಾಲನೆ ನೀಡಿದ್ದು ಅವೈಜ್ಞಾನಿಕವಾಗಿದೆ ಎಂದು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ವಿಶ್ವನಾಥ ಪಟ್ಟಿ ಖಂಡಿಸಿದ್ದಾರೆ.
ಈಗಾಗಲೇ ಮಳೆಗಾಲ ಶುರುವಾಗಿದ್ದು.ಭಾರತೀಯ ಜೈನ ಸಂಘಟನೆ ಹಾಗೂ ಶಿಲ್ಪಾ ಫೌಂಡೇಶನ್ ಸಹಯೋಗದಲ್ಲಿ ಶಾಸಕರು ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದು ಸರಿಯಲ್ಲ. ಕೆರೆಯ ಸುತ್ತಮುತ್ತ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಿ ಹದ್ದುಬಸ್ತು ಮಾಡಿ ಆನಂತರ ಕಾಮಗಾರಿಗೆ ಚಾಲನೆ ನೀಡಬೇಕು. ಮಳೆಗಾಲದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ಮಳೆಬಂದು ಅಡ್ಡಿಯಾಗಬಹುದು ಹಾಗಾಗಿ ಇದು ಸೂಕ್ತ ಸಮಯವಲ್ಲ ಎಂದು ಟೀಕಿಸಿದ್ದಾರೆ.