
ಬ್ಯಾಡಗಿ,ಮಾ7: ಸರ್ಕಾರದ ಯೋಜನೆಗಳ ಜೊತೆಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲೂ ಕೆರೆಗಳ ಪುನಶ್ಚೇತನ, ಕಾಲುವೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲಾ ಕಾರ್ಯಗಳ ಉಸ್ತುವಾರಿಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳಲಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಹಳೇಗುಂಗುರುಕೊಪ್ಪ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃಧ್ದಿ ಪ್ರಾಧಿಕಾರದ ಅಡಿಯಲ್ಲಿ ಶ್ರೀಮಾರುತಿ ಕೆರೆ ಬಳಕೆದಾರರ ಸಂಘದ ವತಿಯಿಂದ ಕೈಗೆತ್ತಿಕೊಂಡಿರುವ ಗ್ರಾಮೀಣ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಪೂರ್ವಜರು ಕೆರೆಗಳನ್ನು ನಿರ್ಮಿಸಿದರು. ಆದರೆ, ನಾವು ಅದೇ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅವುಗಳನ್ನು ನಾಶಪಡಿಸುತ್ತಿದ್ದೇವೆ. ಇದಕ್ಕೆ ಸರ್ಕಾರಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನವೂ ಕಾರಣವಾಗಿದೆ. ಆದರೆ, ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದರಲ್ಲದೇ, ಹಿಂದಿನ ಸರ್ಕಾರಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹಾಳಾಗುತ್ತಿರುವ ಕ್ಷೇತ್ರದ ಕೆರೆಗಳನ್ನು ಪುನಶ್ಚೇತನಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭರಮಪ್ಪ ಹೊನ್ನತ್ತಿ ವಹಿಸಿದ್ದರು. ವಿ.ಎಸ್.ಎಸ್.ಬ್ಯಾಂಕ್ ಅಧ್ಯಕ್ಷ ಚಂದ್ರಪ್ಪ ಬಾರ್ಕಿ, ಸಂತೋಷ ಗಿಡ್ಡಣ್ಣನವರ, ಹನುಮಂತಪ್ಪ ಹಾವೇರಿ, ಮಹದೇವಪ್ಪ ಕಟ್ಟಿಮನಿ, ಹನುಮಂತಪ್ಪ ಇಂಡಿ, ಲಕ್ಷ್ಮಣ ಕೋನಮ್ಮನವರ, ಹನುಮಂತಪ್ಪ ಕನಕಾಪುರ, ಇಲಾಖೆಯ ಅಧೀಕ್ಷಕ ಲಿಂಗಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.