ಕೆರೆ ಸ್ವಚ್ಛಗೊಳಿಸಲು ಆಗ್ರಹ

(ಸಂಜೆವಾಣಿ ವಾರ್ತೆ)
ನವಲಗುಂದ,ಆ25 : ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದು ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಕಸಕಡ್ಡಿ ಬೆಳೆದಿದ್ದಲ್ಲದೇ ನೀರು ಕೂಡ ಕಲುಷಿತಗೊಂಡಿದ್ದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದ್ದು ಈ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶಗೊಂಡು ತಾಪಂ ಇಒ ಹಾಗೂ ಜಿಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಅರೆಕುರಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿನ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದರೂ ಅದೇ ನೀರು ಕುಡಿಯುವಂತಾಗಿದೆ ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತಾಗಿ ಗ್ರಾಮಪಂ ಅಧಿಕಾರಿಗಳಿಗೆ ಪದೆ,ಪದೆ ಹೆಳಿದರೂ ಕ್ಯಾರೆ ಎನ್ನದ ಗ್ರಾಪಂ ಪಿಡಿಒ ವಿರುದ್ಧ ಹರಿಹಾಯ್ದರು.
ಪ್ರಸ್ತುತ ಕೆರೆಯಲ್ಲಿ ನೀರು ಖಾಲಿಯಾಗುವ ಹಂತದಲ್ಲಿದ್ದು ಮಲಪ್ರಭಾ ಕಾಲುವೆಯಿಂದ ಕುಡಿಯಲು ನೀರು ಹರಿಸಲಾಗುತ್ತಿದ್ದುದರಿಂದ ಗುರುವಾರ ಗ್ರಾಪಂ ಸಿಬ್ಬಂದಿ ನೀರು ತುಂಬಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಗ್ರಾಮಸ್ಥರು ವಿಷಯ ತಿಳಿದು ಕೆರೆ ಸ್ವಚ್ಛಗೊಳಿಸುವವರೆಗೆ ನೀರು ತುಂಬಿಸಬಾರದೆಂದು ತಕರಾರು ತೆಗೆದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಾಪಂ ಇಒ ಭಾಗ್ಯಶ್ರೀ ಜಹಗೀರದಾರ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಮುಂದಾದರು ಆದರೂ ಪಟ್ಟು ಬಿಡದ ಗ್ರಾಮಸ್ಥರು ತಾಪಂ ಇಒ,ಜಿಪಂ ನೀರು ಸರಬರಾಜು ವಿಭಾಗದ ಅಭಿಯಂತರ ಹಾಗೂ ಗ್ರಾಪಂ ಪಿಡಿಒ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ ಯಾವುದೇ ಕಾರಣಕ್ಕೂ ಕೆರೆಯನ್ನು ಸ್ವಚ್ಛಗೊಳಿಸುವವರೆಗೆ ಕೆರೆಗೆ ನೀರು ತುಂಬಿಸಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.