ಕೆರೆ ಸಂರಕ್ಷಣೆ, ನಿರ್ಮಾಣ, ಅಂತರ್ಜಲ ಸಂಮೃದ್ದಿ ನಮ್ಮ ಜವಾಬ್ದಾರಿ

ರಾಯಚೂರು,ಜೂ.೧೦-
ದೇಶದ ಬೆನ್ನೆಲುಬದ ರೈತರ ಸಂರಕ್ಷಣೆ, ಅಂತರ್ಜಲ ಸಮೃದ್ಧಿ, ಕೆರೆಗಳ ನಿರ್ಮಾಣ ಸೇರಿ ನಿರಂತರ ಜನರ ಸೇವೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಣ್ಣ ನೀರಾವರಿ ಸಚಿವರಾದ ಎನ್.ಎಸ್ ಬೋಸರಾಜು ಅವರು ಅಧಿಕಾರಿಗಳಿಗೆ ತಿಳಿಸಿದರು.
ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಇಲಾಖೆ ಕೊಪ್ಪಳ ವಿಭಾಗದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.
ಕಳೆದ ಹತ್ತು ವರ್ಷದಿಂದ ಕೊಪ್ಪಳ ವಿಭಾಗದಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿದ್ದು. ಕಾಮಗಾರಿಗಳು ಪೂರ್ಣಗೊಳ್ಳದೆ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳ ವಿಭಾಗದ ಸಣ್ಣ ನೀರಾವರಿ, ಏತ ನೀರಾವರಿ ಕೆರೆಗಳ ಸಮಗ್ರ ಗುಣಮಟ್ಟದ ವರದಿ ಸೇರಿದಂತೆ ಅಂತರ್ಜಲ ಸಮೃದ್ಧಿಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ವರದಿ ನೀಡುವಂತೆ ಸೂಚಿಸಿದರು.
ಕೊಪ್ಪಳ ಜಿಲ್ಲೆಯಲ್ಲಿಯೇ ಬಹುತೇಕ ಏತ ನೀರಾವರಿ ಕಾಮಗಾರಿಗಳು ನಡೆಯುತ್ತಿದ್ದು, ೫೦ ಲಕ್ಷಕ್ಕೂ ಮೀರಿದ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿವೆ ಅವುಗಳನ್ನು ಸ್ಥಳ ಪರಿಶೀಲಿಸಿ ನಿಗದಿತ ಉದ್ದೇಶ ಈಡೇರಿದೆಯೋ ಇಲ್ಲವೇ ಎಂಬುದನ್ನು ಮಾಹಿತಿ ನೀಡಬೇಕು. ನಿಡಶೇಷಿ, ಮಿಯಾಪುರ, ಹೊಸಳ್ಳಿ, ಮುದೇನೂರು, ಅಮರಾಪುರ ಕರೆಗಳಪ್ರಗತಿ ನಿಧಾನಗತಿಯಲ್ಲಿದ್ದು, ಈ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿ ವರ್ತನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಮಾನ್ವಿ ತಾಲ್ಲೂಕಿನ ಸಂಕೇಶ್ವರ ಕೆರೆಗೆ ೩೫ ಎಕರೆ ಭೂಮಿ ಅವಶ್ಯಕತೆ ಇದ್ದು, ಕಳೆದ ನಾಲ್ಕು ವರ್ಷದ ಹಿಂದೆಯೇ ಮಾನ್ವಿಯಲ್ಲಿ ಸಭೆ ನಡೆಸಿ ಈ ಬಗ್ಗೆ ಸೂಚನೆ ನೀಡಿದರೂ ಇಲ್ಲಿಯವರೆಗೂ ಒಂದಿಂಚೂ ಪ್ರಗತಿ ಕಂಡಿಲ್ಲ ಎಂದು ಸಹಾಯಕ ಕಾರ್ಯಪಾಲಕರ ಅಭಿಯಂತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣವೇ ಭೂಸ್ವಾಧಿನಪಡಿಸಲು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದರು.
ರಾಯಚೂರು ತಾಲ್ಲೂಕಿನ ಚಂದ್ರಬಂಡಾ, ಯಾಪಲದಿನ್ನಿ, ಗಣಮೂರು, ತುಂಟಾಪುರ, ಕುರುಬದೊಡ್ಡಿ, ಗೋನವಾರ, ಏಗನೂರು ಮತ್ತು ರಾಜಲಬಂಡಾ ಗ್ರಾಮಗಳಲ್ಲಿ ಕೆರೆ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ನನಗೆ ಮಾಹಿತಿ ಬಂದಿದೆ. ಈ ಎಲ್ಲಾ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ಸರಾಸರಿ ೩೦ ಲಕ್ಷದಿಂದ ೧.೫ ಕೋಟಿ ವರೆಗೆ ಹಣ ಖರ್ಚು ಮಾಡಲಾಗಿದೆ. ಸಮರ್ಪಕ ಬಳಕೆ ದೂರುಗಳಿದ್ದು, ಇದನ್ನು ಸಹ ಸ್ಥಳ ಪರಿಶೀಲಿಸಲು ಅಧೀಕ್ಷಕ ಅಭಿಯಂತರರಿಗೆ ನಿರ್ದೇಶನ ನೀಡಿದರು.
ಮಾನ್ವಿ ತಾಲೂಕಿನ ಮದ್ಲಪೂರು ಮತ್ತು ದದ್ದಲ್ ಏತನೀರಾವರಿ ಯೋಜನೆ ೨೦೧೮ರಲ್ಲಿ ಪೂರ್ಣಗೊಂಡರೂ ನಿಗದಿತ ಉದ್ದೇಶ ಸಾಕಾರಗೊಳ್ಳುತ್ತಿಲ್ಲ ಎಂಬ ಮಾಹಿತಿ ತಿಳಿದ ಅವರು ವರ್ಷಗಳಾದರೂ ಯೋಜನೆಗಳು ಪೂರ್ಣಗೊಳ್ಳದೆ ಇದ್ದರೆ ಸರ್ಕಾರದ ಹಣ ಪೋಲಾದಂತಾಗುತ್ತದೆ. ಈ ಬಗ್ಗೆ ನಿಗಾ ವಹಿಸಲು ನಿರ್ದೇಶನ ನೀಡಿದರು.
ಅಳವಂಡಿ ಕೆರೆ ಪೂರ್ಣಗೊಂಡಿದ್ದರೂ ನೀರಾವರಿ ಆಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿ ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿದ್ದು, ಈ ಕಾಮಗಾರಿಯನ್ನೂ ಸಹ ವೀಕ್ಷಿಸಿ ವರದಿ ನೀಡಲು ಸೂಚನೆ ನೀಡಿದರು.
ಅಂದ್ರಾಳ, ಕನಕಗಿರಿ, ಕಾರಟಗಿ, ಸಂಕನೂರು ಕೆರೆಗಳ ಗುಣಮಟ್ಟದ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಮತ್ತು ರಾಜ್ಯದಲ್ಲಿ ೧೨೪ ಕೆರೆಗಳು ಹಲವು ಹಂತದಲ್ಲಿ ಕೈಗೆತ್ತಿಕೊಂಡಿದ್ದು, ಅವುಗಳ ಯಥಾಸ್ಥಿತಿ ವರದಿ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ್ ಸೇರಿ ಸಣ್ಣ ನೀರಾವರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಕೊಪ್ಪಳ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.