ಕೆರೆ ಪುನಶ್ಚೇತನ ಪರಿಶೀಲಿಸಿದ ದಿಗ್ವಿಜಯ ಬೋಡ್ಕೆ

ಕನಕಪುರ,ಜೂ.೭- ಅಮೃತ ಸರೋವರ ಯೋಜನೆಯಡಿ ಕೆರೆ ಪುನಶ್ಚೇತನ ಮಾಡಿರುವುದನ್ನು ರಾಮನಗರ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ ಬೋಡ್ಕೆ ಪರಿಶೀಲಿಸಿದರು.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕನಕಪುರಕ್ಕೆ ಭೇಟಿ ನೀಡಿದ್ದ ಅವರು ಕನಕಪುರ ತಾಲ್ಲೂಕಿನ ಕೋಡಿಹಳ್ಳಿ, ಹುಣುಸನಹಳ್ಳಿ ಮತ್ತು ಕೊಳಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಮೃತ ಯೋಜನೆಯಡಿ ಪುನಶ್ಚೇತ ಮಾಡಿರುವಂತಹ ಕೆರೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಅಮೃತ ಸರೋವರ ಯೋಜನೆ ಅಡಿ ಕೆರೆಗಳ ಪುನಶ್ಚೇತನ ಮಾಡುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ, ವ್ಯರ್ಥವಾಗಿ ಹರಿದು ಹೋಗುವ ಮಳೆಯ ನೀರನ್ನು ಸಂಗ್ರಹಿಸಿ ಜನ ಮತ್ತು ಜಾನುವಾರಗಳ ಬಳಕೆಗೆ ಉಪಯೋಗವಾಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹಿಸುವುದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.
ನರೇಗಾ ಯೋಜನೆ ಅಡಿ ಅಮೃತ ಸರೋವರ ಕಾಮಗಾರಿಯನ್ನು ಮಾಡಬಹುದಾಗಿದೆ, ಇದಕ್ಕೆ ಯಾವುದೇ ಲಿಮಿಟ್ ಇರುವುದಿಲ್ಲ, ಜಾಬ್ ಕಾರ್ಡ್ ಬಳಸಿ ಕೂಲಿ ಮತ್ತು ಮೆಟೀರಿಯಲ್ ಹಣವನ್ನು ಬಳಕೆ ಮಾಡಬಹುದು. ನರೇಗಾ ಯೋಜನೆಯ ಅನುಷ್ಠಾನದಿಂದ ನರೇಗದಲ್ಲಿ ಅನುಪಾತವನ್ನು ಸರಿದೂಗಿಸಬಹುದಾಗಿದೆ ಎಂದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲಾ ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಪುನಶ್ಚೇತನ ಮಾಡಬಹುದಾಗಿದೆ. ಕೆರೆಗಳ ಅಭಿವೃದ್ಧಿಯಲ್ಲಿ ಕೆರೆಗೆ ನೀರು ಒಳ ಬರಲು ಮತ್ತು ಹೊರ ಹೋಗಲು ನಿರ್ಮಿಸಬೇಕು, ಪಂಚಾಯತಿಯಿಂದ ಕೆರೆ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಪಂಚಾಯ್ತಿ ಅಧಿಕಾರಿಗಳು ಸದಸ್ಯರ ಜೊತೆಗೂಡಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು, ಬಾಕಿ ಇರುವ ಕೆರೆಗಳ ಅಭಿವೃದ್ಧಿ ಪ್ರಾರಂಭಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಪಂಚಾಯ್ತಿಯಿಂದ ನರೇಗಾ ಯೋಜನೆಯಡಿ ಕೆಲಸ ಮಾಡುವ ಜಾಬ್ ಕಾರ್ಡ್‌ದಾರರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದು ಬಿಪಿ, ಷುಗರ್ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು. ಆರೋಗ್ಯ ಇಲಾಖೆಯ ಶೋಭಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸುನೀಲ್‌ಕುಮಾರ್, ಅಂಗನವಾಡಿ ಕಾರ್ಯಕರ್ತೆಯರಾದ ಮಂಗಳಗೌರಿ, ಶ್ವೇತಾ ಉಪಸ್ಥಿತರಿದ್ದರು.