ಕೆರೆ ನೀರು ಸೋರಿಕೆ-ಕ್ರಮಕ್ಕೆ ಒತ್ತಾಯ

ಮುಳಬಾಗಿಲು, ಡಿ.೨೨- ನಗರದ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆಯ ಕಟ್ಟೆ ಶಿಥಿಲಗೊಂಡಿದ್ದು ಈ ಬಗ್ಗೆ ಯಾವುದೇ ಇಲಾಖೆ ಅಧಿಕಾರಿಗಳು ಗಮನಹರಿಸದಿದ್ದು ಕೆರೆಯ ತುಂಬ ನೀರಿದ್ದು ಕೆರೆಯ ಕಟ್ಟೆಯಿಂದ ನೀರು ಸೋರಿಕೆಯಾಗುತ್ತಿದ್ದು ರಾಘವೇಂದ್ರಸ್ವಾಮಿ ಮಠದ ಹಿಂಭಾಗದ ಮನೆಗಳ ರಸ್ತೆಗಳಲ್ಲಿ ಕೆರೆ ನೀರು ನುಗ್ಗುತ್ತಿವೆ.
ರಾತ್ರಿಯವೇಳೆ ಕಟ್ಟೆ ಏನಾದರೂ ತೊಂದರೆಗೊಳಗಾದರೆ ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣಹಾನಿಗೆ ಕಾರಣವಾಗುತ್ತದೆ ಎಂಬುದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಬಗ್ಗೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಗಮನಕ್ಕೆ ತಂದಾಗ ಸ್ಥಳ ಪರಿಶೀಲನೆ ಮಾಡಿ ನಗರಸಭೆಗೆ ಗಮನಹರಿಸುವಂತೆ ಸೂಚಿಸಲಾಗುವುದೆಂದು ತಿಳಿಸಿದ್ದು ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ ರವರ ಗಮನಕ್ಕೆ ತಂದರೆ, ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರುತ್ತದೆ ಎಂದು ತಿಳಿಸಿದ್ದು ಜನರು ಪ್ರಾಣ ಭಯದಿಂದ ಬದುಕಬೇಕಾಗುತ್ತದೆ ಎಂದು ಹೆಚ್.ಎಸ್.ರವೀಂದ್ರ ಪ್ರಸಾದ್, ರಂಗವಿಠಲಾಚಾರ್, ಎಂ.ಎನ್.ಬದ್ರೀನಾಥ್, ವರಲಕ್ಷ್ಮಿ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ.


ಕೆರೆ ಕಟ್ಟೆ ಏನಾದರು ಒಡೆದರೆ ತಗ್ಗು ಪ್ರದೇಶದಲ್ಲಿರುವ ಅಗ್ರಹಾರ, ಸಂತೇಮೈದಾನ, ತೋಟಲಪಾಳ್ಯ, ಸೋಮೇಶ್ವರಪಾಳ್ಯ ನಿವಾಸಿಗಳಿಗೆ ತೊಂದರೆ ಕಟ್ಟಿಟ್ಟಬುತ್ತಿ, ಆದ್ದರಿಂದ ನೂರಾರು ಕುಟುಂಬಗಳ ರಕ್ಷಣೆ ಈ ಕಟ್ಟೆಯಿಂದ ಅಡಗಿದ್ದು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.
ಈ ಕೆರೆಯ ಬಗ್ಗೆ ಪತ್ರಿಕೆಯಲ್ಲಿ ೨ಬಾರಿ ವರದಿ ಪ್ರಕಟಿಸಿ ಕಟ್ಟೆ ಶಿಥಿಲಗೊಂಡಿರುವುದನ್ನು ವರದಿಯಲ್ಲಿ ಪ್ರಕಟಿಸಲಾಗಿತ್ತು.
ವರದಿಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಸ್ಪಂದನೆ ಸಿಕ್ಕಿ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದೆ ಬಂದಿದ್ದು ಅದಕ್ಕೆ ಕೆರೆ ಅಭಿವೃದ್ಧಿ ಸಮಿತಿ ರಚನೆ ಸೇರಿದಂತೆ ನಗರಸಭೆ ಮತ್ತು ತಹಶೀಲ್ದಾರ್ ಇಲಾಖೆಯಿಂದ ಒಡಂಬಡಿಕೆ ಪತ್ರಕ್ಕೆ ಅನುಮೋದನೆ ಪಡೆಯಲು ನಿಧಾನವಾದ ಒಂದು ವರ್ಷ ಅಭಿವೃದ್ಧಿ ಹಿನ್ನಡೆಯಾಗಿದೆ. ಈಗ ಕೆರೆ ತುಂಬಿ ತುಳುಕುತ್ತಿದ್ದು ಕನಿಷ್ಟ ಕಟ್ಟೆಯನ್ನು ಸ್ವಚ್ಚಗೊಳಿಸಿದರೆ ನೀರು ಸೋರಿಕೆಯಾಗುತ್ತಿರುವ, ಶಿಥಿಲಗೊಂಡ ಸ್ಥಳವನ್ನು ದುರಸ್ಥಿಮಾಡುವ ಕಾರ್ಯ ತಕ್ಷಣ ಆಗಬೇಕಾಗಿದೆ.
ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಡಳಿತ, ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕಾಗಿದೆ.