ಕೆರೆ ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕರ ಕುಟುಂಬಕ್ಕೆ ಪರಿಹಾರ

ಕೊರಟಗೆರೆ, ನ. ೧೨- ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಹೊಸಹಳ್ಳಿ ಗ್ರಾಮದ ಬಾಲಕರ ಕುಟುಂಬಗಳಿಗೆ ಶಾಸಕ ಡಾ. ಜಿ. ಪರಮೇಶ್ವರ ಸಹಾಯಧನ ನೀಡಿ, ಸಾಂತ್ವಾನ ಹೇಳಿದರು.
ತಾಲ್ಲೂಕಿನ ಅಕ್ಕಿರಾಂಪುರ ಕೆರೆಯಲ್ಲಿ ಆಳವಾಗಿ ತೋಡಿದ್ದ ಗುಂಡಿಯಲ್ಲಿ ಸತೀಶ್ ಮತ್ತು ನಂದನ್‌ಕುಮಾರ್ ಎಂಬ ಬಾಲಕರು ಈಜಲು ಹೋಗಿ ಮೃತಪಟ್ಟಿದ್ದರು. ವಿಷಯ ತಿಳಿದ ಶಾಸಕರು ಮೃತರ ಕುಟುಂಬಗಳಿಗೆ ಖುದ್ದಾಗಿ ಭೇಟಿ ನೀಡಿ ವಿವರ ಪಡೆದು ಕುಟುಂಬಗಳಿಗೆ ಸಾತ್ವನ ಹೇಳಿ ಪರಿಹಾರ ಧನ ವಿತರಿಸಿದರು.
ನಂದನ್‌ಕುಮಾರ್ ತಂದೆ ಹನುಮಂತರಾಯಪ್ಪನ ಮನೆ ದುಸ್ಥಿತಿಯಲ್ಲಿದ್ದ ಮನೆಯನ್ನು ಕಂಡ ಶಾಸಕರು ಆತನ ಕುಟುಂಬಕ್ಕೆ ಮನೆ ಮಂಜೂರಾತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಇಂತಹ ದುರ್ಘಟನೆಗಳು ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸುವುದಾಗಿ ಹಾಗೂ ಪೋಷಕರು ಹಾಗೂ ಸಾರ್ವಜನಿಕರು ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷ ವೆಂಕಟಪ್ಪ, ತುಮುಲ್ ನಿರ್ದೇಶಕ ಈಶ್ವರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ್‌ನಾರಾಯಣ, ಎಲ್‌ಐಸಿ ರಾಜಣ್ಣ, ಹೆಚ್.ಎಂ.ರುದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.