ಕೆರೆ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಳ: ಮಲ್ಲಪ್ಪ

ಬೀದರ್:ಜು.30: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಮುಖ್ಯ ಎಂಜಿನಿಯರ್ ಸಿ.ಕೆ. ಮಲ್ಲಪ್ಪ ಅವರು ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಯೋಜನೆ ಪ್ರಗತಿ ಪರಿಶೀಲಿಸಿದರು.
ಯೋಜನೆಯಡಿ ಕೆರೆ ನಿರ್ಮಾಣ, ಕೆರೆ ಪುನಃಶ್ಚೇತನದಿಂದ ಜಲಮೂಲ ಹಾಗೂ ಅಂತರ್ಜಲ ಮಟ್ಟ ಹೆಚ್ಚಲಿದೆ. ರೈತರು, ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನರೇಗಾ ಅಡಿಯಲ್ಲಿ ಬೀದರ್, ಔರಾದ್, ಭಾಲ್ಕಿ, ಬಸವಕಲ್ಯಾಣ, ಹುಲಸೂರು ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಕೈಗೊಂಡ ನೂತನ ಕೆರೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಗಳನ್ನು ಇನ್ನೂ ಉತ್ತಮ ಗುಣಮಟ್ಟದಿಂದ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ ಜಿಲ್ಲೆಯಲ್ಲಿ ಅಮೃತ ಸರೋವರಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ 15 ಕೆರೆಗಳನ್ನು ಆಗಸ್ಟ್ 15 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಬಾಲಾಜಿ ಕೋಟೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ, ದೀಪಕ್ ಕಡಿಮನಿ, ಮರೆಪ್ಪ ಸಿ. ಹರವಾಳ್ಕರ್ ಇದ್ದರು.