ಕೆರೆ ಕಾಲುವೆ ನಾಪತ್ತೆ : ಜಂಟಿ ತಪಾಸಣೆ ವೇಳೆಯೂ ಸಿಗದ ಪರಿಹಾರ!


ಶಿವಮೊಗ್ಗ, ನ. 21: ಶಿವಮೊಗ್ಗ ತಾಲೂಕು ಬಸವನಗಂಗೂರು ಕೆರೆ ಕಾಲುವೆ ಅವ್ಯವಸ್ಥೆಯಿಂದ,
ತಗ್ಗು ಪ್ರದೇಶದ ಜನ ವಸತಿ ಪ್ರದೇಶಗಳು ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ,
ಶನಿವಾರ ಸಣ್ಣ ನೀರಾವರಿ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ (ಕೆ.ಹೆಚ್.ಬಿ.)
ಅಧಿಕಾರಿಗಳ ತಂಡ ಜಂಟಿ ತಪಾಸಣೆ ನಡೆಸಿತು.
ಕೆ.ಹೆಚ್.ಬಿ. ಪ್ರೆಸ್ ಕಾಲೋನಿ, ಸರ್ಕಾರಿ ನೌಕರರ ಸಂಘದ ಲೇಔಟ್ ಹಾಗೂ ಬಸವಗಂಗೂರು
ಕೆರೆಗೆ ಅಧಿಕಾರಿಗಳ ತಂಡ ಭೇಟಿಯಿತ್ತು ಪರಿಶೀಲಿಸಿತು. ಸಣ್ಣ ನೀರಾವರಿ ಇಲಾಖೆ
ಕಾರ್ಯಪಾಲಕ ಅಭಿಯಂತರ (ಇ.ಇ.) ಮೂಡಲ ಗಿರಿಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ
(ಎ.ಇ.ಇ.) ಮಂಜುನಾಥ್, ಸಹಾಯಕ ಎಂಜಿನಿಯರ್ (ಎ.ಇ.) ಮಂಜುನಾಥ್, ಕರ್ನಾಟಕ ಗೃಹ ಮಂಡಳಿ
(ಕೆ.ಹೆಚ್.ಬಿ.) ಎ.ಇ. ಹರೀಶ್, ಸಿಬ್ಬಂದಿ ಸುರೇಶ್ ಬಾಬು ಉಪಸ್ಥಿತರಿದ್ದರು.
ಸಿಗದ ಪರಿಹಾರ: ಮೇಲ್ಭಾಗದಲ್ಲಿ ಕೆರೆ ಕಾಲುವೆಯಿದೆ. ಆದರೆ ಪ್ರೆಸ್ ಕಾಲೋನಿಯಲ್ಲಿ
ಮಾತ್ರ ಕಾಲುವೆ ಇಲ್ಲದಿರುವುದು ಹೇಗೆ? ಬಡಾವಣೆ ಅಭಿವೃದ್ದಿ ವೇಳೆ ಕೆರೆ ನೀರು ಹರಿದು
ಹೋಗುವ ಕಾಲುವೆಯನ್ನು ಕೆ.ಹೆಚ್.ಬಿ. ನಿರ್ಮಿಸಿಲ್ಲ. ಸಣ್ಣ ಚರಂಡಿ ನಿರ್ಮಿಸಲಾಗಿದೆ.
ಇದರಿಂದ ಕೆರೆ ನೀರು ಬಡಾವಣೆಗೆ ನುಗ್ಗುವಂತಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ
ಅಧಿಕಾರಿಗಳು ಹೇಳಿದರು.
ಕೆರೆ ನೀರು ಹರಿದು ಬರುವ ಕಾರಣದಿಂದಲೇ ನೀರು ಸಂಗ್ರಹಣಾ ವ್ಯವಸ್ಥೆ ಮಾಡಲಾಗಿದೆ. ಆದರೆ
ಸೂಕ್ತ ಕಾಲುವೆ ನಿರ್ಮಿಸಿಲ್ಲ. ನೀರು ಹರಿದು ಹೋಗುವ ಕಾಲುವೆ ನಿರ್ಮಿಸುವಂತೆ, ಸಣ್ಣ
ನೀರಾವರಿ ಇಲಾಖೆ ಅಧಿಕಾರಿಗಳು ಕೆ.ಹೆಚ್.ಬಿ. ಎಂಜಿನಿಯರ್ ಗೆ ಸೂಚಿಸಿದರು.
ಕೆ.ಹೆಚ್.ಬಿ. ಎಂಜಿನಿಯರ್ ಮಾತನಾಡಿ, ‘ಬಡಾವಣೆ ನಕಾಶೆಯಲ್ಲಿ ಕೆರೆ ಕಾಲುವೆ ಹಾದು
ಹೋಗಿರುವ ಮಾಹಿತಿಯಿಲ್ಲ. ಈ ಕಾರಣದಿಂದ ರಾಜಕಾಲುವೆ ನಿರ್ಮಿಸಿಲ್ಲ’ ಎಂದು ಹೇಳಿದರು.
ಕ್ರಮಕೈಗೊಳ್ಳಿ: ಪತ್ರಕರ್ತ ಬಿ.ರೇಣುಕೇಶ್ ಮಾತನಾಡಿ, ‘ಕಾಲೋನಿಯಲ್ಲಿ ಮಾತ್ರ ಕೆರೆ
ಕಾಲುವೆ ನಾಪತ್ತೆಯಾಗಿರುವುದು ಹೇಗೆ. ಪ್ರಸ್ತುತ ಕೆರೆ ಉಕ್ಕಿ ಹರಿಯುತ್ತಿರುವುದರಿಂದ
ಕಳೆದೊಂದು ವಾರದಿಂದ ಕಾಲೋನಿ ಜಲಾವೃತವಾಗಿದೆ. ಪ್ರತಿವರ್ಷ ಕೆರೆ ಭರ್ತಿಯಾದ ವೇಳೆ ಇದೇ
ಸ್ಥಿತಿ ಎದುರಾಗುತ್ತಿದೆ. ಕಾಲಮಿತಿಯೊಳಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ,
ಕೆ.ಹೆಚ್.ಬಿ. ಹಾಗೂ ಸಣ್ಣ ನೀರಾವರಿ ಇಲಾಖೆ ಕ್ರಮಕೈಗೊಳ್ಳಬೇಕು’ ಎಂದು
ಆಗ್ರಹಿಸಿದ್ದಾರೆ.