ಕೆರೆ ಕಟ್ಟೆ ಅಭಿವೃದ್ಧಿಗೆ ರೈತ ಸಂಘ ಒತ್ತಾಯ


ಕೋಲಾರ,ನ.೧೯: ಗಡಿ ಭಾಗದ ರಾಮಸಾಗರ ಕೆರೆ ಕಟ್ಟೆ ಮೇಲಿರುವ ಗಿಡಗಳನ್ನು ತೆರವುಗೊಳಿಸಿ ಶಿಥಿಲಗೊಂಡಿರುವ ಕೆರೆ ಕಟ್ಟೆಯನ್ನು ಅಭಿವೃದ್ಧಿಪಡಿಸಬೇಕೆಂದು ರೈತಸಂಘದಿಂದ ರಾಮಸಾಗರ ಕೆರೆ ಕಟ್ಟೆ ಮೇಲೆ ಹೋರಾಟ ಮಾಡಿ ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಹರಿಕೃಷ್ಣ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೆಜಿಎಫ್ ತಾಲೂಕು ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಪೂರ್ವಜರು ಬೆವರು ಹನಿ ಸುರಿಸಿ ಕಟ್ಟಿ ಬೆಳೆಸಿದಂತಹ ಕೆರೆಗಳು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆ ಕಟ್ಟೆ ಅಭಿವೃದ್ಧಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸದೆ ಬೇಜವಾಬ್ದಾರಿಯಿಂದ ಇಂದು ಮುಂಗಾರು ಮಳೆ ಆರ್ಭಟಕ್ಕೆ ತುಂಬಿ ತುಳುಕುತ್ತಿರುವ ಕೆರೆ ನೀರನ್ನು ಕಟ್ಟೆಗಳು ಶಿಥಿಲಗೊಂಡಿರುವುದನ್ನು ಅಭಿವೃದ್ಧಿಪಡಿಸಲು ವಿಫಲವಾಗಿ ಕೆರೆ ನೀರು ಪೋಲಾಗುತ್ತಿದ್ದರೂ ಅನುದಾನದ ಕೊರತೆಯಲ್ಲಿ ಅಧಿಕಾರಿಗಳು ಕೆರೆ ಕಡೆ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಸಿರುಸೇನೆ ತಾಲೂಕು ಅಧ್ಯಕ್ಷ ರಾಮಸಾಗರ ಸಂದೀಪ್ ಮಾತನಾಡಿ, ರಾಮಸಾಗರ ದೊಡ್ಡ ಕೆರೆ ತುಂಬಿದಾಗ ಜನಪ್ರತಿನಿಧಿಗಳು ತಾ ಮುಂದು ನಾ ಮುಂದು ಎಂದು ಕೆರೆಗೆ ಬಾಗೀನ ಅರ್ಪಿಸಲು ಮುಂದಾಗಿದ್ದರೆ ಹೊರತು ಕೆರೆ ಕಟ್ಟೆ ಮೇಲಿರುವ ಗಿಡಗಂಟಿಗಳು ಹಾಗೂ ಶಿಥಿಲಗೊಂಡಿರುವ ಕೆರೆ ಕಟ್ಟು ಕಣ್ಣಿಗೆ ಕಾಣಿಸುತ್ತಿಲ್ಲ.
ರಾತ್ರಿ ಹಗಲು ಕಷ್ಟಪಟ್ಟು ಮಳೆರಾಯನನ್ನು ಬೇಡಿಕೊಂಡು ಕೆರೆ ತುಂಬಿಸಿಕೊಂಡ ಹಾಗೆ ಪತ್ರಿಕಾ ಮತ್ತು ಮಾಧ್ಯಮಗಳಿಗೆ ೨೫ ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಗೆ ವರುಣನ ಕೃಪೆಯಿಂದ ಕೆರೆ ತುಂಬಿದೆ ಎಂದು ಹೇಳಿಕೆ ನೀಡುವುದಕ್ಕೆ ಸೀಮಿತವಾಗಿ ಮುಳ್ಳು ಪೊದೆಗಳಂತೆ ಕಟ್ಟೆ ಮೇಲಿರುವ ಗಿಡಗಳು ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಸಾಗರ ಮನೋಹರ್ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಶಾಶ್ವತ ನೀರಾವರಿ ಯೋಜನೆಯಲ್ಲಿ ಸಾವಿರಾರು ಕೋಟಿ ಕೆಸಿವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಭ್ರಷ್ಟಾಚಾರ ಎಸಗುತ್ತಿದ್ದಾರೆ ಹೊರತು ಪ್ರಕೃತಿ ದತ್ತವಾಗಿ ವರುಣನ ಕೃಪೆಯಿಂದ ತುಂಬಿರುವ ಕೆರೆಗಳ ಅಭಿವೃದ್ಧಿ ಮಾಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬಳಿ ಅನುದಾನದ ಕೊರತೆ ನೆಪದಲ್ಲಿ ಕೆರೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಇದೇ ರೀತಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕೆರೆ ವಿರೋಧಿ ನೀತಿ ಮುಂದುವರೆದರೆ ಜನರೇ ಕಾನೂನನ್ನು ಕೈಗೆತ್ತಿಕೊಂಡು ಅಧಿಕಾರಿಗಳಿಗೆ ಬುದ್ಧಿ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ನಳಿನಿಗೌಡ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಮುಖಂಡ ಪಾರಂಡಹಳ್ಳಿ ಮಂಜುನಾಥ್, ನಾಗಭೂಷಣ್, ತಾಲೂಕು ಕಾಯಾಧ್ಯಕ್ಷ ಸುರೇಶ್‌ಬಾಬು, ಕೆಜಿಎಫ್ ಬಸ್ ಮಂಜು, ಸಂದೀಪ್‌ರೆಡ್ಡಿ, ಶ್ರೀನಿವಾಸ್‌ರೆಡ್ಡಿ, ಮನೋಹರ್, ಪ್ರದೀಪ್, ಮಣಿ, ನಾಗರಾಜ್, ಚಂದ್ರಪ್ಪ, ಇದ್ದರು.