ಕೆರೆ ಕಟ್ಟೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡದಿದ್ದರೆ ಹೋರಾಟ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.17: ಅತಿವೃಷ್ಠಿಯಿಂದ ಹಾನಿಗೀಡಾಗಿ ಮರನಾಲ್ಕು ವರ್ಷಗಳೇ ಕಳೆದಿದ್ದರೂ ಇದುವರೆಗೂ ರಾಜ್ಯ ಸರ್ಕಾರ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಮುಂತಾದ ಕೆರೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಸಂತಾಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡದಿದ್ದರೆ ರಾಜ್ಯ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಎಚ್ಚರಿಸಿದ್ದಾರೆ.
ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ಅವರು ಮಾವಿನಕಟ್ಟೆ ಕೊಪ್ಪಲು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.
2021 ರಲ್ಲಿ ಕ್ಷೇತ್ರದಲ್ಲಿ ಬಿದ್ದ ಭಾರೀ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಲವಾರು ಕೆರೆಗಳು, ರಸ್ತೆ ಮತ್ತು ಸೇತುವೆಗಳು ಹಾನಿಗೀಡಾಗಿದ್ದವು. ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ ಮುಂತಾದ ಕೆರೆಗಳನ್ನು ದುರಸ್ತಿ ಮಾಡಲಾಯಿತು. ಆದರೆ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಗ್ರಾಮಗಳ ಒಡೆದು ಹೋದ ಕೆರೆಗಳನ್ನು ಇದುವರೆಗೂ ದುರಸ್ಥಿ ಮಾಡಿಲ್ಲ. ತಾಲೂಕಿನಲ್ಲಿಂದು ಉತ್ತಮ ಮಳೆಯಾಗುತ್ತಿದೆ. ಆದರೆ ಒಡೆದು ಹೋಗಿರುವ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಒಡೆದು ಹೋಗಿರುವ ತಾಲೂಕಿನ ಕೆರೆ ಕಟ್ಟೆಗಳನ್ನು ತಕ್ಷಣವೇ ದುರಸ್ಥಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ನಾನು ಶಾಸಕನಾದ ಆರಂಭದಿಂದಲೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಕೆರೆ ಏರಿ ದುರಸ್ತಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್, ಮುಖ್ಯ ಅಭಿಯಂತರರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದರೂ ನಮ್ಮ ಮನವಿಗೆ ಯಾರೊಬ್ಬರು ಸ್ಪಂದಿಸಿಲ್ಲ. ದಿನಾಂಕ 14-06-2024 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಮುಖತಃ ಭೇಟಿ ಮಾಡಿ ಕೆರೆ ದುರಸ್ತಿ ಮಾಡುವಂತೆ ಪತ್ರ ಸಲ್ಲಿಕೆ ಮಾಡಿದ್ದೇನೆ.
ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ನನ್ನ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇನೆ ಎಂದು ತಿಳಿಸಿದ ಶಾಸಕ ಹೆಚ್.ಟಿ.ಮಂಜು ರಾಜ್ಯ ಸರ್ಕಾರ ರೈತರ ಹಿತದೃಷ್ಠಿಯಿಂದ ತಾಲೂಕಿನಲ್ಲಿ ಒಡೆದು ಹೋಗಿರುವ ಕೆರೆಗಳ ದುರಸ್ತಿಗೆ ತಕ್ಷಣ ಕ್ರಮ ವಹಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರ ಜೊತೆಗೂಡಿ ಕೆರೆಗಳ ಅಭಿವೃದ್ದಿಗೆ ಅನುದಾನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಶೀಘ್ರದಲ್ಲಿಯೇ ಅನಿರ್ಧಿಷ್ಟ ಕಾಲದ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಜಾನಕಿರಾಮ್, ಸಂತೆ ಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ನೀರಾವರಿ ಇಲಾಖೆಯ ನಿವೃತ್ತ ಇಂಜಿನಿಯರ್ ಶಿವಲಿಂಗೇಗೌಡ, ಮಾವಿನಕಟ್ಟೆ ಕೊಪ್ಪಲು ಗ್ರಾಮಸ್ಥರಾದ ಸತೀಶ್, ದೇವರಾಜ್, ರವಿ, ಉಮೇಶ್, ಲೋಕನಹಳ್ಳಿ ಗ್ರಾಮಸ್ಥರಾದ ಮಹೇಶ್, ಶೀನಣ್ಣ, ಪಾಪಣ್ಣ, ತೇಜುಕುಮಾರ್, ಬಾಲರಾಜ್, ಜಗದೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.