ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿಸುವಂತೆ ರೈತ ಸಂಘ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.16: ಹೇಮಾವತಿ ನೀರು ಬಿಡುಗಡೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸಿದ್ದು ತಕ್ಷಣವೇ ತಾರತಮ್ಯ ನೀತಿಯನ್ನು ಕೈಬಿಟ್ಟು ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ತಾಲೂಕು ರೈತಸಂಘದ ಮುಖಂಡರು ಸುದ್ದಿಗೋಷ್ಠಿ ನಡೆಸಿಗೊರೂರು ಜಲಾಶಯದ ಹೇಮಾವತಿ ಎಡದಂಡೆ ನಾಲೆಯ ಒಂದು ಭಾಗದ ಮುಖ್ಯ ಕಾಲುವೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ಮೂರು ತಾಲೂಕುಗಳ ನೂರಾರು ಕೆರೆಗಳು ಹೇಮಾವತಿ ನೀರನ್ನು ಅವಲಂಭಿಸಿವೆ. ಕಳೆದ ವರ್ಷ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ರೈತರ ಅನುಕೂಲಕ್ಕೆ ಬೇಸಿಗೆಯಲ್ಲಿ ನೀರು ಹರಿಸದೆ ವಂಚಿಸಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಬೇಸಿಗೆಯಲ್ಲಿ ಕಾಲುವೆಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ವಿಫಲವಾದ ಪರಿಣಾಮ ತಾಲೂಕಿನ ಕೆರೆ ಕಟ್ಟೆಗಳು ಖಾಲಿಯಾಗಿದ್ದು ಜನ ಜಾನುವಾರುಗಳಿಗೆ ನೀರಿನ ಅಭಾವ ಕಾಣಿಸಿಕೊಂಡಿದೆ.
ಜೊತೆಗೆ ಅಂತರ್ಜಲ ಮಟ್ಟ ಕುಸಿದಿದೆ. ಪರಿಣಾಮ ರೈತರ ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿದ್ದು ಪಂಪ್ ಸೆಟ್ ಆದಾರಿತ ಕೃಷಿಕರು ತಮ್ಮ ಬೆಳೆ ಸಂರಕ್ಷಣೆಯ ಚಿಂತೆಯಲ್ಲಿದ್ದಾರೆ. ಮಲೆನಾಡಿನಲ್ಲಿ ಪ್ರಸಕ್ತ ಅಲ್ಪಸ್ವಲ್ಪ ಪ್ರಮಾಣದ ಮಳೆಯಾದ ಪರಿಣಾಮ ಒಂದಷ್ಟು ನೀರು ಹೇಮಾವತಿ ಜಲಾಶಯದ ಒಡಲಿಗೆ ಹರಿದು ಬಂದಿದೆ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಮೂಲತ: ತುಮಕೂರು ಜಿಲ್ಲೆಯವರಾಗಿದ್ದು ಅವರು ತಮ್ಮ ಅಧಿಕಾರದ ಪ್ರಭಾವ ಬಳಕೆ ಮಾಡಿ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ಜನರಿಗಾಗಿ ನೀರು ಬಿಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರವನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದಾರೆ. ಆದರೂ ರಾಜ್ಯ ಸರ್ಕಾರ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಜಿಲ್ಲೆಯ ಜನರಿಗೆ ಹೇಮಾವತಿ ನೀರು ಹರಿಸದೆ ಕೇವಲ ತುಮಕೂರು ಜಿಲ್ಲೆಗೆ ನೀರು ಬಿಡುವ ಮೂಲಕ ತಾರತಮ್ಯ ನೀತಿ ಅನುಸರಿಸಿದೆ. ಜಿಲ್ಲೆ ಸಚಿವರಾದ ಚಲುವರಾಯಸ್ವಾಮಿ ಬರಪೀಡಿತ ನಾಗಮಂಗಲ ತಾಲೂಕಿಗೆ ಸೇರಿದ್ದರೂ ತಮ್ಮ ಜನರಿಗಾಗಿ ನೀರು ಬಿಡಿಸಲು ಮುಂದಾಗದಿರುವುದು ಆಶ್ಚರ್ಯಕರ ಎಂದಿರುವ ರೈತ ಮುಖಂಡರು ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ವಹಿಸಿ ಹೇಮಾವತಿ ಎಡದಂಡೆಯ ಮೂಲಕ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿದ್ದಾರೆ.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಾಜಿ ಅಧ್ಯಕ್ಷ ಮುದ್ದುಕುಮಾರ್, ಕಾರ್ಯದರ್ಶಿ ಬೂಕನಕೆರೆ ನಾಗರಾಜು, ಮುಖಂಡರಾದ ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೇಶವಮೂರ್ತಿ, ನಗರೂರು ಕುಮಾರ್ ಮತ್ತಿತರರಿದ್ದರು.