ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ

ಕೆ.ಆರ್.ಪೇಟೆ.ಮಾ.23: ತಾಲ್ಲೂಕಿನ ಗೂಡೇಹೊಸಹಳ್ಳಿ ಬಳಿ ಹೇಮಾವತಿ ನದಿಯಿಂದ ಸಂತೇಬಾಚಹಳ್ಳಿ ಹೋಬಳಿಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 212ಕೋಟಿ ರೂಪಾಯಿಗಳ ವೆಚ್ಚದ ಏತ ನೀರಾವರಿ ಯೋಜನಾ ಕಾಮಗಾರಿಯ ಪೈಪ್‍ಲೈನ್ ಅಳವಡಿಸುವ ಕಾಮಗಾರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕ್ರೀಡಾ ಮತ್ತು ಸಾಂಖ್ಯಿಕ ಖಾತೆ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ ಅವರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ನಾನು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ. ನಮ್ಮ ತಾಲ್ಲೂಕಿನವರೇ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದದಿಂದ ರಾಜ್ಯ ಸಂಪುಟ ದರ್ಜೆ ಸಚಿವನಾಗಿ ರಾಜ್ಯದ ಹಾಗೂ ತಾಲ್ಲೂಕಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸಂಪೂರ್ಣ ಮಳೆಯಾಶ್ರಿತ ಹೋಬಳಿಯಾದ ಸಂತೇಬಾಚಹಳ್ಳಿ ಹೋಬಳಿಗೆ ಸುಮಾರು 212ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗೂಡೇಹೊಸಹಳ್ಳಿ ಬಳಿ ಹರಿಯುವ ಹೇಮಾವತಿ ನದಿಯಿಂದ ಏತನೀರಾವರಿ ಮೂಲಕ ನೀರು ಹರಿಸಲು ಅನುಧಾನ ಮಂಜೂರು ಮಾಡಿಕೊಡುವ ಮೂಲಕ ಹೋಬಳಿಯ 40ವರ್ಷಗಳ ಕನಸನ್ನು ನನಸು ಮಾಡಿದ್ದಾರೆ. ಇದರಿಂದ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಇರುವ ಸಾವಿರಾರು ಎಕರೆ ತೆಂಗಿನ ಮರಗಳು ಉಸಿರಾಡಲು ಸಾಧ್ಯವಾಗುತ್ತದೆ. ಸಾವಿರಾರು ಕೃಷಿ ಪಂಪ್‍ಸೆಟ್‍ಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಕೆರೆ ಬಯಲಿನಲ್ಲಿ ಫಸಲು ಬೆಳೆಯಲು ಸಾಧ್ಯವಾಗಲಿದೆ ಎಂದರು.
ಇದಲ್ಲದೆ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕೆ.ಆರ್.ಎಸ್ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಯೋಜನೆ ಸುಮಾರು 666ಕೋಟಿ ರೂ ನೀಡಿದ್ದಾರೆ. ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗೆ ಏತನೀರಾವರಿ ಸೌಲಭ್ಯ ಕಲ್ಪಿಸಲು 350ಕೋಟಿ ರೂಗಳನ್ನು ನೀಡಿದ್ದಾರೆ. ಹೀಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸುಮಾರು 1300ಕೋಟಿಗೂ ಹೆಚ್ಚು ಅನುಧಾನ ನೀಡುವ ಮೂಲಕ ನನ್ನ ಆಶಯದಂತೆ ತಾಲ್ಲೂಕನ್ನು ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಈ ಎಲ್ಲಾ ಕಾಮಗಾರಿಗಳಿಗೆ ಅತಿಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಮೃತ ಹಸ್ತದಿಂದಲೇ ಶಂಕುಸ್ಥಾಪನೆ ಮಾಡಿಸಲಾಗುವುದು ಹಾಗೂ ತಾಲ್ಲೂಕಿನ ಜನತೆಯ ಪರವಾಗಿ ನಾಗರೀಕ ಸನ್ಮಾನ ಮಾಡಿ ಗೌರವಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿಯಾಗಿ ಹೆರಿಗೆ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಮತ್ತು ಡಯಾಲಿಸಿಸ್ ಸೆಂಟರನ್ನು ಆರಂಭಿಸಲು ಸರ್ಕಾರದಿಂದ ಮಂಜೂರಾತಿ ಮಾಡಿಸಿದ್ದೇನೆ. ಅತ್ಯುತ್ತಮ ದರ್ಜೆಯ ಕ್ರೀಡಾ ತರಬೇತಿ ಶಾಲೆಯನ್ನು ತಾಲ್ಲೂಕಿನಲ್ಲಿ 25 ಎಕರೆ ಭೂಪ್ರದೇಶದಲ್ಲಿ ಆರಂಭಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗೆ ನೂರಾರು ಅಭಿವೃದ್ಧಿ ಕಾಮಗಾರಿಗಳನ್ನು ತಾಲ್ಲೂಕಿನಲ್ಲಿ ನಡೆಸಲು ಮುಖ್ಯಮಂತ್ರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇದಲ್ಲದೆ ಕೆ.ಆರ್.ಪೇಟೆ ಪಟ್ಟಣದ ಜನತೆಗೆ ಸುಮಾರು 17ಕೋಟಿ ರೂಗಳ ವೆಚ್ಚದಲ್ಲಿ ನಿತ್ಯ 1ಕೋಟಿ 10ಸಾವಿರ ಲೀಟರ್ ಶುದ್ದ ಕುಡಿಯುವ ನೀರು ಪೂರೈಕೆ ಘಟಕವನ್ನು ಮಂಜೂರು ಮಾಡಿಸಲಾಗಿದೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮನ್‍ಮುಲ್ ನಿರ್ದೇಶಕರಾದ ಕೆ.ಜಿ. ತಮ್ಮಣ್ಣ, ಸಚಿವರ ಆಪ್ತ ಸಹಾಯಕ ದಯಾನಂದ್, ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.