
ಕೆ.ಆರ್.ಪೇಟೆ: ಫೆ.21:- ಏತ ನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಕೆಗಾಗಿ ಗ್ರಾಮದ ರಸ್ತೆಯನ್ನು ಗುಂಡಿ ತೆಗೆದು ಹಾಳುಮಾಡುವುದಕ್ಕೆ ವಿರೋಧ ಮಾಡಿ ಗ್ರಾಮಸ್ಥರು ಕಾಮಗಾರಿಗೆ ತಾತ್ಕಾಲಿಕವಾಗಿ ತಡೆಯೊಡ್ಡಿದ ಘಟನೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ.
ಕೃಷ್ನಾರಾಜ ಸಾಗರದ ಜಲಾಶಯದ ಹಿನ್ನೀರನ್ನು ಸದ್ಬಳಕೆ ಮಾಡಿ ತಾಲೂಕಿನ ಶೀಳನೆರೆ ಹೋಬಳಿಯ ಕೆರೆ-ಕಟ್ಟೆಗಳನ್ನು ತುಂಬಿಸುವ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ. ಸುಮಾರು 220 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಪೈಪ್ ಲೈನ್ ಅಳವಡಿಕೆಯ ಕಾರ್ಯ ಬರದಿಂದ ನಡೆಯುತ್ತಿದೆ. ಬೃಹತ್ ಪೈಪುಗಳ ಮೂಲಕ ಕಟ್ಟಹಳ್ಳಿ ಬಳಿ ಕೆ.ಆರ್.ಎಸ್ ಹಿನ್ನೀರಿಗೆ ಸೇರಿದ ಹೇಮಾವಬತಿ ನದಿಯಿಂದ ನೀರೆತ್ತಿ ಶೀಳನೆರೆ ಹೋಬಳಿಯ ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಮೂಲಗುರಿ. ಇದಕ್ಕಾಗಿ ಯೋಜನೆಯ ಮೂಲಸ್ಥಳವಾದ ಕಟ್ಟಹಳ್ಳಿಯಿಂದ ದೊದ್ದನಕಟ್ಟೆ-ಬೂಕನಕೆರೆ ಮಾರ್ಗವಾಗಿ ಪೈಪ್ ಅಳವಡಿಕೆಗೆ ಗುಂಡಿ ತೆಗೆಯಲಾಗುತ್ತಿದೆ. ಬೂಕನಕೆರೆ ಗ್ರಾಮದ ರಸ್ತೆಗಳು ಈಗಾಗಲೇ ಹಾಳಾಗಿವೆ. ಗ್ರಾಮೀಣ ರಸ್ತೆಗಳಲ್ಲಿ ಋಯತರು ಸಂಚರಿಸಲಾರದಷ್ಟು ರಸ್ತೆಗಳು ಹದಗೆಟ್ಟಿವೆ. ಅಭಿವೃದ್ದಿ ಕಾಮಗಾರಿಯ ಹೆಸರಿನಲ್ಲಿ ನೀವು ರಸ್ತೆಯಲ್ಲಿ ಗುಂಡಿ ತೆಗೆದು ಹಾಳುಮಾಡಿದರೆ ಅಳಿದುಳಿದ ಗ್ರಾಮೀಣ ರಸ್ತೆಯನ್ನು ಸರಿಪಡಿಸುವವರ್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮದ ರಸ್ತೆ ಬದಿಯಲ್ಲಿ ಗುಂಡಿ ತೆಗೆದು ಪೈಪ್ ಹಾಕುವ ಬದಲು ಗ್ರಾಮದ ಹೊರವಲಯದ ಪರ್ಯಾಯ ಮಾರ್ಗದಲ್ಲಿ ಪೈಪ್ ಅಳವಡಿಕೆಯ ಕಾಮಗಾರಿ ನಡೆಸುವಂತೆ ಆಗ್ರಹಿಸಿ ಪ್ರತಿಭಟಿಸುವ ಮೂಲಕ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಬೂಕನಕೆರೆ ಗ್ರಾಮದ ರೈತ ಮುಖಂಡ ಅಂಗಡಿ ನಾಗರಾಜು, ಬಿ.ಕೆ.ದಿನೇಶ್, ಮಂಜೇಗೌಡ, ಲೋಹಿತ್, ಬಿ.ಆರ್.ರವಿ. ಟೆಂಪೂ ನಾಗಣ್ಣ, ವಿಶ್ವನಾಥ್, ತ್ಯಾಗರಾಜು ಮತ್ತಿತರರಿದ್ದರು.