
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.03: ಕೆರೆ ಒತ್ತುವರಿ ವಿಚಾರವಾಗಿ ತಾಲೂಕಿನ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ. ಮಾತಿನ ಚಕಮಕಿಯೊಂದಿಗೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗಿದೆ. ವಡ್ಡರಹಳ್ಳಿ ಹಾಗೂ ಹೆಗ್ಗಡಹಳ್ಳಿ ಗ್ರಾಮಸ್ಥರ ನಡುವೆ ಘರ್ಷಣೆ ಏರ್ಪಟ್ಟಿದ್ದು ದೊಣ್ಣೆ ದಡಿಗೆಗಳಿಂದ ಬಡಿದಾಡಿಕೊಂಡಿದ್ದರಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಏನಾಯ್ತು? ವಡ್ಡರಹಳ್ಳಿ ಹಾಗೂ ಹೆಗ್ಗಡಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಕೆರೆ 23.30 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಕೆರೆಯಲ್ಲಿ ತುಂಬಿರುವ ಹೂಳೆತ್ತಿಸಿ ಅಭಿವೃದ್ಧಿಪಡಿಸಲು 75 ಲಕ್ಷ ರು. ಹಣ ಬಿಡುಗಡೆಯಾಗಿತ್ತು. ಈ ಕೆರೆಯನ್ನು ಅಭಿವೃದ್ಧಿಪಡಿಸುವುದಾದರೆ ಮೊದಲು ಒತ್ತುವರಿ ತೆರವುಗೊಳಿಸುವಂತೆ ಕೆ.ಆರ್.ಎಸ್ ಪಕ್ಷದವರು ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಶುಕ್ರವಾರ ತಹಸೀಲ್ದಾರ್ ನಿಸರ್ಗಪ್ರಿಯ ಅವರು ಸ್ಥಳ ಪರಿಶೀಲನೆ ನಡೆಸಿ ವಾಪಸಾಗಿದ್ದರು. ಆನಂತರದಲ್ಲಿ ಎರಡು ಗ್ರಾಮದ ಜನರ ನಡುವೆ ಗಲಾಟೆ ಶುರುವಾಗಿದೆ. ನಿಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಕಡಿಮೆ ಒತ್ತುವರಿ ಜಾಗ ತೆರವುಗೊಳ್ಳುತ್ತಿದೆ. ನಮ್ಮ ಕಡೆ ಹೆಚ್ಚು ಜಾಗ ತೆರವು ಆಗುತ್ತಿದೆ ಎನ್ನುವುದು ಗಲಾಟೆಗೆ ಮೂಲ ಕಾರಣವಾಯಿತು.
ಮಾತಿನಲ್ಲಿ ಆರಂಭವಾದ ಜಗಳ ಹೊಡೆದಾಟದ ಹಂತ ತಲುಪಿತು. ಎರಡೂ ಕಡೆಯವರು ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಎರಡೂ ಗ್ರಾಮಗಳ ಕೆಲವು ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಡಿದಾಟದ ವೇಳೆ ಕೆಲವರಿಗೆ ಸಣಪುಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.