ಕೆರೆ ಒತ್ತುವರಿ ತೆರುವಿಗೆ ಆಗ್ರಹ

ಶ್ರೀನಿವಾಸಪುರ; ಏ.೯- ಕಳೆದುಹೋಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಹುಡುಕಿಕೊಟ್ಟು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸರ್ಕಾರಿ ಕೆರೆಯನ್ನು ಉಳಿಸಬೇಕೆಂದು ಏ.೧೨ರ ಬುಧವಾರ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನಗರಕ್ಕೆ ಕೂಗಳತೆ ದೂರದಲ್ಲಿರುವ ಮಳೆ ನೀರು ಸಂಗ್ರಹವಾಗುವ ಸರ್ಕಾರಿ ಕೆರೆ ಸರ್ವೇ ನಂ.೭೨ರಲ್ಲಿ ೧೫ ಎಕರೆ ೨೪ ಗುಂಟೆ ಕೆರೆ ಜಮೀನನ್ನು ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಕೋಟ್ಯಾಂತರ ರೂಪಾಯಿ ಕೆರೆ ಜಮೀನನ್ನೇ ಅಕ್ರಮ ದಾಖಲೆಗಳನ್ನು ಸೃಷ್ಠಿ ಮಾಡಿ ಪ್ರಭಾವಿ ಬಿಜೆಪಿ ನಾಯಕ ಸೇರಿದಂತೆ ಕೆಲವರಿಗೆ ನಿಯತ್ತಾಗಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಟ್ಟಿರುವ ತಾಲೂಕು ಆಡಳಿತದ ಅವ್ಯವಸ್ಥೆ ವಿರುದ್ಧ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಅವರು ಇದೇ ಕೆರೆ ಸರ್ವೇ ನಂಬರ್ ೭೨ನ್ನು ಹೊಸ ನಂಬರ್ ಆಗಿ ದುರಸ್ಥಿ ಮಾಡಿರುವ ನಂಬರ್ ನಲ್ಲಿ ೫ ಎಕರೆ ೧೦ ಗುಂಟೆ ಮಾಡಿಕೊಳ್ಳುವ ಮುಖಾಂತರ ಕೆರೆ ಒತ್ತುವರಿ ಮಾಡಿಕೊಂಡಿರುವುದು ಯಾವ ನ್ಯಾಯ ಸ್ವಾಮಿ ? ಜವಾಬ್ದಾರಿ ಸ್ಥಾನದಲ್ಲಿದ್ದು ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ತಾವುಗಳೇ ರಸ್ತೆ ಪಕ್ಕದಲ್ಲಿದೆ ಎಂದು ಖರೀದಿ ಮಾಡಿದರೆ ಇನ್ನು ಕೆರೆಯನ್ನು ಉಳಿಸುವವರು ಯಾರು ಎಂದು ಬಿಜೆಪಿ ಜಿಲ್ಲಾಧ್ಯಕ್ಷರನ್ನು ಪ್ರಶ್ನೆ ಮಾಡಿದರು.
ಕೆರೆ ಅಂಗಳ ಎಂದು ಸರ್ವೇ ದಾಖಲೆ ಹೇಳುತ್ತಿದೆ. ಆದರೆ ಕಂದಾಯ ಅಧಿಕಾರಿಗಳು ಕೆರೆ ಸ್ವರೂಪ ಹಾಳಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ತೆರ್‍ನಹಳ್ಳಿ ಆಂಜಿನಪ್ಪ ಮಾತನಾಡಿ, ತಾಲೂಕಿನಾದ್ಯಂತ ಭೂಮಿ ಇಲ್ಲದ ರೈತಾಪಿ ವರ್ಗಕ್ಕೆ ಎರಡು ಎಕರೆ ಜಮೀನು ಹಾಗೂ ಕುರಿಗಾಹಿಗಳು ಕುರಿ ಮೇಯಿಸಲು ಗೋಮಾಳ ಜಮೀನನ್ನು ಹುಡುಕಾಡಿದರೂ ಅಂಗೈ ಅಗಲ ಜಾಗ ಸಿಗುವುದಿಲ್ಲ. ಆದರೆ, ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ನಗರಕ್ಕೆ ಹೊಂದಿಕೊಂಡಿರುವ ಕೆರೆಯನ್ನೇ ಮಾರಾಟಕ್ಕೆ ಇಟ್ಟಿದ್ದರೆ ಇನ್ನು ಜನಸಾಮಾನ್ಯರಿಗೆ ನ್ಯಾಯ ಸಿಗುವುದೇ.
ಸರ್ವೇ ನಂಬರ್ ೭೨ರ ಪಣಸಮಾಕನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ವಿಶೇಷ ಕಂದಾಯ ಸರ್ವೇ ಅಧಿಕಾರಿಗಳ ತಂಡ ರಚನೆ ಮಾಡಿ ಸರ್ವೇ ಮಾಡಿಸಿ ಕಳೆದುಹೋಗಿರುವ ಕೆರೆಯನ್ನು ಹುಡುಕಿಕೊಟ್ಟು ಅಭಿವೃದ್ಧಿಪಡಿಸಿ ಒತ್ತುವರಿ ದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಏ.೧೨ರ ಬುಧವಾರ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ಕೆರೆ ಉಳಿಸುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಂಬಲ ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವು, ಸಂತೋಷ್, ಶೇಖ್ ಶಭೀಉಲ್ಲಾ, ಸಹದೇವಣ್ಣ, ಫಾರೂಖ್ ಪಾಷ, ಬಂಗಾರಿ ಮಂಜು, ರಾಮಸಾಗರ ವೇಣು, ಸಂದೀಪ್ ಗೌಡ, ಕಿರಣ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಹೆಬ್ಬಣಿ ಆನಂದರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗಿರೀಶ್ ಮುಂತಾದವರಿದ್ದರು.