ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕೋಲಾರ,ಜು,೧೧- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ವೇಮಗಲ್ ಯೋಜನಾ ಕಚೇರಿಯ ವ್ಯಾಪ್ತಿಯ ಸುಗುಟೂರು ವಲಯದ ಗೊಟ್ಟಹಳ್ಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಯೋಜನಾಧಿಕಾರಿ ಅನಿಲ್ ಚಾಲನೆ ನೀಡಿದರು.
ಕೆರೆಯ ಅಂಗಳದಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಕೋಲಾರ ಜಿಲ್ಲೆಯಲ್ಲಿ ಹಲವಾರು ಕೆರೆಗಳ ಪುನಶ್ಚೇತನಕ್ಕೆ ಕ್ರಮವಹಿಸಲಾಗಿದೆ, ಈ ನಿಟ್ಟಿನಲ್ಲಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಸಹಕಾರದಿಂದ ಕೋಲಾರದ ಹಲವಾರು ಕೆರೆಗಳಿಗೆ ಮರು ಜೀವ ನೀಡಲಾಗಿದೆ ಎಂದರು.
ಕೆರೆ ಅಭಿವೃದ್ದಿ ಕುರಿತಂತೆ ತಾಲ್ಲೂಕಿನ ಅರಾಭಿಕೊತ್ತನೂರು ಕೆರೆಯನ್ನು ಉದಾಹರಿಸಿದ ಅವರು, ಕೆರೆಯಲ್ಲಿನ ಹೂಳು ತೆಗೆದಿದ್ದರಿಂದಾಗಿ ಇಂದು ಕೆರೆಯಲ್ಲಿ ನೀರು ತುಂಬಿದ್ದು, ಸುತ್ತಮುತ್ತಲ ಕೊಳವೆ ಬಾವಿಗಳಲ್ಲೂ ಅಂತರ್ಜಲ ಮರುಪೂರಣವಾಗಿದೆ ಎಂದು ತಿಳಿಸಿದರು.
ಕೆರೆಗಳು ನಮ್ಮ ನೀರಿನ ಜೀವಾಳವಾಗಿದ್ದು, ನಮ್ಮ ಹಿರಿಯರು ದೂರದೃಷ್ಟಿಯಿಂದ ಮಾಡಿರುವ ಈ ಕೆರೆಗಳ ಸರಪಳಿಯನ್ನು ಉಳಿಸುವ ಮೂಲಕ ಅಮೂಲ್ಯವಾದ ನೀರನ್ನು ಉಳಿಸುವ ಕಾರ್ಯದಲ್ಲಿ ಸಮುದಾಯದ ಸಹಕಾರವೂ ಅಗತ್ಯವಿದೆ ಎಂದು ತಿಳಿಸಿದರು.
ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಮ್ಮೂರಿನ ಕೆರೆ ಸಂರಕ್ಷಣೆಗೆ ಕೈಜೋಡಿಸಿದ್ದು, ಸಾರ್ವಜನಿಕರು ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.