ಕೆರೆಯ ಶಾಶ್ವತ ದುರಸ್ತಿಗೆ ಆದ್ಯತೆ: ಮುನೇನಕೊಪ್ಪ

ಧಾರವಾಡ, ನ.19: ಇಲ್ಲಿನ ಹೊಲ್ತಿಕೋಟಿ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೆÇೀಲಾದ ಪರಿಣಾಮವಾಗಿ ರೈತರ ಬೆಳೆಗಳು, ಪ್ರಾಣಿ, ಪಕ್ಷಿಗಳಿಗೆ ಅಪಾರ ಹಾನಿಯಾಗಿದೆ. ಕೆರೆಯ ಶಾಶ್ವತ ದುರಸ್ತಿಗೆ ಆದ್ಯತೆಯಡಿ ಕ್ರಮವಹಿಸಲಾಗುವುದು. ಸದ್ಯ ಸೂಕ್ತ ತಾಂತ್ರಿಕತೆಯೊಂದಿಗೆ ಪೆÇೀಲಾಗುತ್ತಿರುವ ನೀರನ್ನು ತಡೆಯಲು ಪ್ರಯತ್ನಿಸಲಾಗುವುದು. ಮುಂಬರುವ 2-3 ದಿನಗಳವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ರೈತರು ಜೀವ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹೊಲ್ತಿಕೋಟಿಯ ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿ, ಹಾನಿ ವೀಕ್ಷಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸುಮಾರು 110 ಮಿಲಿ ಮೀಟರ್ ಪ್ರಮಾಣದ ಮಳೆಯಾದ ಪರಿಣಾಮವಾಗಿ, ಹೊಲ್ತಿಕೋಟಿ ಕೆರೆಗೆ ಒಳಹರಿವು ಹೆಚ್ಚಾದ ಪರಿಣಾಮ, ಕೆರೆಯ ತಡೆಗೋಡೆ ಒಡೆದು ಸುಮಾರು 27 ಎಕರೆ ವಿಸ್ತಾರದ ಕೆರೆಯಲ್ಲಿ  ಸಂಗ್ರಹವಾಗಿದ್ದ ದೊಡ್ಡ ಪ್ರಮಾಣದ ನೀರು ಪೆÇೀಲಾಗಿದೆ. ಸುಮಾರು 300 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಭತ್ತ ಹಾನಿಯಾಗಿದೆ. ಜಿಲ್ಲೆಯ ಕುಂದಗೋಳ, ನವಲಗುಂದ, ಹುಬ್ಬಳ್ಳಿ, ಕಲಘಟಗಿ ತಾಲೂಕುಗಳಲ್ಲಿಯೂ ಕೂಡ ಮಳೆಯಿಂದ ಹತ್ತಿ ಬೆಳೆ ಹಾನಿಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಬೆಳೆ ಹಾಗೂ ಮನೆಗಳ ಹಾನಿಗೊಳಗಾದವರಿಗೆ ಸಮೀಕ್ಷೆ ವರದಿ ಆಧರಿಸಿ ಪರಿಹಾರ ಒದಗಿಸಲಾಗುವುದು ಎಂದರು.

ಹಳ್ಳಿಗೇರಿ ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ಅರಳಿಕಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ, ಧಾರವಾಡ ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಂ.ಗೌಡರ್ ಸೇರಿದಂತೆ ಗ್ರಾಮಸ್ಥರು, ರೈತರು ಇದ್ದರು.