ಕೆರೆಯ ಚಂದಮ್ಮರಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ

ಕಲಬುರಗಿ,ಮೇ.14:ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಇರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುವರ್ಣ ಸಭಾಭವನದಲ್ಲಿ ಮೇ 15ರಂದು ಬೆಳಿಗ್ಗೆ 10-30ಕ್ಕೆ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಕೆರೆಯ ಚಂದಮ್ಮ ಅವರಿಗೆ 24ನೇ ವರ್ಷದ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಅವರು ತಿಳಿಸಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ವಹಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಪ್ರಶಸ್ತಿ ಪ್ರದಾನ ಮಾಡಿ ಗೋಪಾಲಗೌಡರ ಜೀವನ ಸಾಧನೆ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಡಾ. ಸೂರ್ಯಕಾಂತ್ ಪಾಟೀಲ್ ಅವರು ಆಗಮಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕನ್ನಡ ನಾಡು ಕಂಡ ಪ್ರಬುದ್ಧ ಹಾಗೂ ಸಜ್ಜನ ರಾಜಕಾರಣಿ, ಮಹಾನ್ ಕನ್ನಡ ಪ್ರೇಮಿ ಶಾಂತವೇರಿ ಗೋಪಾಲಗೌಡರು ನೈಜ ಸಮಾಜವಾದಿಯಾಗಿದ್ದರು. ಸಾಮಾಜಿಕ ಹಾಗೂ ರಾಜಕೀಯ ಅನಿಷ್ಠಗಳ ವಿರುದ್ಧ ತಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡಿದವರು. ರಾಜಕೀಯದಲ್ಲಿ ಅಗ್ರಪಂಕ್ತಿಯ ನಾಯಕರಾಗಿದ್ದರೂ ಸರಳ ಹಾಗೂ ಬಡತನದ ಬದುಕನ್ನೇ ಆಯ್ದುಕೊಂಡು ಜನಸಾಮಾನ್ಯರಂತೆಯೇ ಬದುಕಿದ ಅಪರೂಪದ ರಾಜಕಾರಣಿ. ಅವರು ಈಗ ಒಂದು ದಂತಕಥೆ. ಕಲೆ, ಸಾಹಿತ್ಯ, ಇತಿಹಾಸ ಹೀಗೆ ಹಲವು ಜ್ಞಾನ ಶಾಖೆಗಳಲ್ಲಿ ಆಳವಾದ ತಿಳುವಳಿಕೆಯನ್ನು ಹೊಂದಿದ್ದ ಹಿರಿಯ ಚೇತನದ ನೆನಪೇ ಕನ್ನಡ ಶಕ್ತಿ ಕೇಂದ್ರಕ್ಕೆ ಸ್ಫೂರ್ತಿ ಹಾಗೂ ಚೇತನ ಎಂದು ಅವರು ಬಣ್ಣಿಸಿದ್ದಾರೆ.
ಶಾಂತವೇರಿ ಗೋಪಾಲಗೌಡರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ತನ್ಮೂಲಕ ಅವರ ನೆನಪನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ನಾಡಿನ ಶ್ರೇಷ್ಠ ವ್ಯಕ್ತಿಗಳನ್ನು ಸಂಸ್ಥೆಯು ಗುರುತಿಸಿ ಅಂತವರಿಗೆ ಪ್ರತಿ ವರ್ಷ ಶಾಂತವೇರಿ ಗೋಪಾಲಗೌಡ ಪ್ರಶಸ್ತಿಯನ್ನು ಕಳೆದ 23 ವರ್ಷಗಳಿಂದ ನೀಡುತ್ತ ಬಂದಿದೆ. ಪ್ರಶಸ್ತಿ ಪತ್ರ, ಕಂಚಿನ ಫಲಕ ಹಾಗೂ 25000ರೂ.ಗಳ ನಗದನ್ನು ಪುರಸ್ಕøತರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
24ನೇ ವರ್ಷದ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಕೆರೆಯ ಚಂದಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯ ಆಳಂದ್ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ದೈತಪ್ಪ- ನಾಗಮ್ಮ ದಂಪತಿಗಳ ಪುತ್ರಿ ಚಂದಮ್ಮ ಅವರು ವೃತ್ತಿಯಲ್ಲಿ ಅಂಗನವಾಡಿ ಸಹಾಯಕಿಯಾಗಿ, ಪ್ರವೃತ್ತಿಯಲ್ಲಿ ಮಹಿಳಾ ಸಂಘಟಕಿಯಾಗಿ ದುಡಿಯುವ ಮಹಿಳೆಯರ ನ್ಯಾಯಯುತ ಬೇಡಿಕೆಗಳ ಇಡೇರಿಕೆಗಾಗಿ ಅವಿರತ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇವದಾಸಿ ಮಹಿಳೆಯರ ಸಮಸ್ಯೆ, ಕಟ್ಟಡ ಕಾರ್ಮಿಕರ ಸಮಸ್ಯೆ, ಕೃಷಿ, ಕಾರ್ಮಿಕರ ಪರವಾಗಿ, ಕೊಳಚೆ ಪ್ರದೇಶ ನಿವಾಸಿಗಳಿಗೆ ವಾಸದ ಮನೆ ಹಕ್ಕು ಪತ್ರ ಕೊಡಿಸುವ ಹೋರಾಟ, ಮನೆ ಗ್ರಾಮ ನೈರ್ಮಲ್ಯಕ್ಕಾಗಿ ಚಿಂತನೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗಾಗಿ ಹೋರಾಟ, ರೈತರ ತೊಗರಿ ಬೆಳೆ ಬೆಂಬಲ ಬೆಲೆಗಾಗಿ ನಡೆಸಿದ ಹೋರಾಟ, ಹೆಣ್ಣು ಮಗು ಉಳಿಸಿ ಆಂದೋಲನ, ಮೂಢನಂಬಿಕೆ ತಡೆ ಕಾಯ್ದೆಗಾಗಿ ಹೋರಾಟ ಮಾಡುತ್ತ ಹಾಗೂ ಬೀದಿ ನಾಟಕ, ಹಾಡು, ಭಾಷಣಗಳ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುತ್ತ ಸಾವಿತ್ರಿಬಾಯಿ ಫುಲೆ ವಿಚಾರವನ್ನು ಪ್ರಚಾರ ಮಾಡುತ್ತ ದುಡಿಯುವ ಮಹಿಳೆಯರಲ್ಲಿ ಸ್ವಾಭಿಮಾನದ ಅರಿವು ಮೂಡಿಸುತ್ತ ದೀನ, ದಲಿತ ಮಹಿಳೆಯರ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ.
ಅಜಾದಪೂರ್ ಗ್ರಾಮವನ್ನು ರಾಜ್ಯದಲ್ಲಿಯೇ ಒಂದು ಅಭಿವೃದ್ಧಿಪೂರ್ಣವಾದ ಗ್ರಾಮವನ್ನಾಗಿ ಮಾಡಿದವರು. ಚಂದಮ್ಮ ಅವರ ನೇತೃತ್ವದಲ್ಲಿ ಆಜಾದಪೂರ್ ಕೆರೆ ಈಗ ತನ್ನ ಎಲ್ಲ ಓರೆ, ಕೋರೆಗಳನ್ನು, ತೊಂದರೆ ತಾಪತ್ರಯಗಳನ್ನು ಕಳೆದುಕೊಂಡು ನಳನಳಿಸುತ್ತಿದೆ. ಸುತ್ತಲಿನ ಕೆರೆ ಕಟ್ಟೆಗಳ ಹೂಳು ತೆಗೆಸಿ ಜನರು ಕೆರೆಯ ನೀರನ್ನು ಕುಡಿಯುವುದಕ್ಕೂ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಉಪಯೋಗಿಸಲು ಕಾರಣರಾದ ಶ್ರೀಮತಿ ಚಂದಮ್ಮ ಅವರಿಗೆ ಗ್ರಾಮಾಂತರ ಜನರು ಕೆರೆಯ ಚಂದಮ್ಮ ಎಂದೇ ಕರೆಯುತ್ತಾರೆ.
ಈಗಾಗಲೇ ಡಾ. ಹೆಚ್. ನರಸಿಂಹಯ್ಯ, ಕಯ್ಯಾರ್ ಕಿಂಯಣ್ಣರೈ, ಡಾ. ಪಾಟೀಲ್ ಪುಟ್ಟಪ್ಪ, ಡಾ. ಜಿ. ನಾರಾಯಣ್, ಕೋಣಂದೂರು ಲಿಂಗಪ್ಪ, ಎಚ್. ಗಣಪತಿಯಪ್ಪ, ಕೆ.ಎಸ್. ಅಶ್ವತ್ಥ, ಡಾ. ಕೆ.ಎಚ್. ರಂಗನಾಥ್, ವಿ.ಎಸ್. ಕೃಷ್ಣ ಅಯ್ಯರ್, ಡಾ. ಎಚ್.ಎಸ್. ದೊರೆಸ್ವಾಮಿ, ಜಾಣಗೆರೆ ವೆಂಕಟರಾಮಯ್ಯ, ಎಸ್.ಕೆ. ಕಾಂತಾ, ಡಾ. ಬರಗೂರು ರಾಮಚಂದ್ರಪ್ಪ, ಡಾ. ಹಿ.ಶಿ. ರಾಮಚಂದ್ರೇಗೌಡ, ಬಿ. ಸ್ವಾಮಿರಾವ್, ಅ.ತಿ. ರಂಗನಾಥ್, ಎಸ್.ವಿ. ಜಯಶೀಲರಾವ್, ಡಾ. ಸುಭದ್ರಮ್ಮ ಮನ್ಸೂರ್, ರಾಚಪ್ಪ ಧೂಳಪ್ಪ ಹಡಪದ್, ಪ್ರೊ. ಚಂದ್ರಶೇಖರ್ ಪಾಟೀಲ್ (ಚಂಪಾ), ಬಿ. ಸುಬ್ಬಯ್ಯಶೆಟ್ಟಿ, ಹೆಚ್.ಡಿ. ಚೌಡಯ್ಯ, ಹೆಚ್. ಏಕಾಂತಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.