ಕೆರೆಗೆ ವಿಷ ಬೆರೆಸಿದ ದುಷ್ಕರ್ಮಿಗಳುಮೀನುಗಳ ಮಾರಣಹೋಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.24: ದುಷ್ಕರ್ಮಿಗಳು ವಿಷ ಹಾಕಿದ ಪರಿಣಾಮ ಕೆರೆಯಲ್ಲಿನ  ಮೀನುಗಳು ಮೃತಪಟ್ಟಿರುವ ಘಟನೆ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಹೆಚ್.ವೀರಾಪುರ ರಸ್ತೆಯ ಕಡ್ಲೆಪಟ್ಟಿ ಪ್ರದೇಶದ ಮೀನು ಸಾಕಾಣಿಕೆ ಕೆರೆಯಲ್ಲಿ ನಡೆದಿದೆ. 
ಅಂದಾಜು 12 ವರೆ ಎಕರೆ ಪ್ರದೇಶದ ಕೆರೆಯಲ್ಲಿ ಚಲ್ಲಾ ಭಾಸ್ಕರ್‌ನಾಯ್ಡು ಎಂಬುವರು ರವ -ಕಟ್ಲಾ ತಳಿಯ ಮೀನುಗಳನ್ನು ಕಳೆದ ಹದಿನೈದು ವರ್ಷಗಳಿಂದ  ಸಾಕಿ ಉತ್ತಮ‌ವರಮಾನ ಕಂಡುಕೊಂಡಿದ್ದರು.
ಅವರ ಏಳಿಗೆಯನ್ನು ಸಹಿಸದೇ, ಕೆರೆಯಲ್ಲಿ ದುಷ್ಕರ್ಮಿಗಳು ವಿಷ ಹಾಕಿದ ಹಿನ್ನಲೆ ಸುಮಾರು 6-7 ಟನ್‌ನಷ್ಟು ಮೀನುಗಳು ಸತ್ತಿವೆ.  ಇದರಿಂದ ಸುಮಾರು 5ರಿಂದ 6 ಲಕ್ಷ ನಷ್ಟವಾಗಿದೆ.  ವಿಷ ಹಾಕಿ ಕೊಂದಂತಹ ದುಷ್ಕರ್ಮಿಗಳನ್ನು ಪತ್ತೆ ಮಾಡಿ, ಶಿಕ್ಷಿಸಬೇಕೆಂದು ಮೀನು ಸಾಕಾಣಿಕೆದಾರ  ಒತ್ತಾಯಿಸಿದ್ದಾನೆ
ಮೀನುಗಳಷ್ಟೇ  ಸತ್ತಿದ್ದರೆ ಅನುಮಾನ ಬರುತ್ತಿರಲಿಲ್ಲ. ಆದರೆ, ಇಲ್ಲಿ ಮೀನು, ಹಾವು, ಕಪ್ಪೆಗಳು ಸತ್ತಿವೆ. ಹೀಗಾಗಿ ಕೆರೆಯಲ್ಲಿ ವಿಷ ಬೆರೆಸಿರುವುದು ಗೋಚರವಾಗುತ್ತಿದೆ. ಕಂಪ್ಲಿಯ ಮೀನು ಮಾರುಕಟ್ಟೆಗೆ ವಾರದಲ್ಲಿ ಎರಡು ಬಾರಿ 1 ಟನ್ ಮೀನು ಕೊಡಲಾಗುತ್ತಿತ್ತು. ಆದರೆ, ಇದರಿಂದ ಸುಮಾರು 6-7 ಟನ್‌ನಷ್ಟು ಮೀನು ಮೃತಪಟ್ಟಿರುವ ಜತೆಗೆ 5-6 ಲಕ್ಷದಷ್ಟು ಆದಾಯ ನಷ್ಟವಾಗಿದೆ. ಈಗಾಗಲೇ ಮೀನುಗಾರಿಕೆ ಇಲಾಖೆಯ ಗಮನಕ್ಕೆ ತಂದಿದೆ, ನಷ್ಟ ಪರಿಹಾರ ನೀಡುವ ಭರವಸೆ ಇದೆ. ದುಷ್ಕರ್ಮಿಗಳ ಪತ್ತೆ ಹಚ್ಚಲು ಕುರುಗೋಡು ಪೊಲೀಸ್ ಠಾಣೆಗೆ ದೂರ ಸಲ್ಲಿಸಲಾಗುವುದು ಎಂದರು.