ಕೆರೆಗಳ ಸಮಗ್ರ ಅಭಿವೃದ್ದಿಗೆ ಕ್ರಮ : ಜಿಲ್ಲಾಧಿಕಾರಿ

ಬಾಗಲಕೋಟೆ: ಏ2 : ಜಿಲ್ಲೆಯಲ್ಲಿರುವ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅವುಗಳ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಜರುಗಿದ ಜಲಶಕ್ತಿ ಅಭಿಯಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆರೆ, ಕಲ್ಯಾಣಿ, ನಾಲಾ ಮುಂತಾದ ಸಾಂಪ್ರದಾಯಿಕ ಜಲಮೂಲಗಳ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಗೊಳಿಸುವ ಮೂಲಕ ಜಲಸಂರಕ್ಷಣೆಗೆ ಕೇಂದ್ರ ಸರಕಾರ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕೆರೆಗಳ ಸದ್ಯವಿರುವ ಸ್ಥಿತಿಗತಿ ಪರಿಶೀಲಿಸಿ ಒತ್ತುವರಿಯಾಗಿದ್ದರೆ ತೆರವು ಕಾರ್ಯಾಚರಣೆಗೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ತಾ.ಪಂ ಇಓಗಳು ಕ್ರಮವಹಿಸಲು ಸೂಚಿಸಿದರು.ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 12, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 12, ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 62, ಪಂಚಾಯತ ರಾಜ್ ವ್ಯಾಪ್ತಿಯಲ್ಲಿ 167 ಕೆರಗಳು ಬರುತ್ತಿದ್ದು, ಕೆರಗಳನ್ನು ತುಂಬಿಸಲು ಕ್ರಮಕೈಗೊಳ್ಳಬೇಕು. ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳ ಒತ್ತುವರಿಯಾದಲ್ಲಿ ತೆರವುಗೊಳಿಸಿ ಅವುಗಳ ಹೂಳು ತೆಗೆಯಲು ಕ್ರೀಯಾ ಯೋಜನೆ ರೂಪಿಸಲು ತಿಳಿಸಿದರು. ಇದರ ಜೊತೆ ರೈತರ ಹೊಲದಲ್ಲಿ ಬದು ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆಯವರು ಕ್ರಮವಹಿಸಲು ತಿಳಿಸಿದರು.
ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಮಾತನಾಡಿ ಜಲಶಕ್ತಿ ಅಭಿಯಾನ ಸಮರ್ಪಕ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಏಪ್ರೀಲ್ 1 ರಿಂದ 100 ದಿನಗಳ ಕಾಲ ಮಳೆ ನೀರು ಸಂರಕ್ಷಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ 262 ಕಾಮಗಾರಿಗಳಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಸಂಬಂಧಿಸಿದ 162 ಮತ್ತು ಜಲ ಸಂರಕ್ಷಣೆ ಸಂಬಂಧಿಸಿದ 85 ಕಾಮಗಾರಿಗಳಿವೆ. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮವಹಿಸಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ ಜಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಮಾರ್ಚ 22 ರಂದು ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಯೋಜನೆ ನವೆಂಬರ 30ರವರೆಗೆ ನಡೆಯಲಿದ್ದು, 5 ಪ್ರಮುಖ ಚಟುವಟಿಕೆಗಳ ಒಳಗೊಂಡಿದೆ. ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆಗಳ ನವೀಕರಣ, ಬೋರವೆಲ್‍ಗಳ ಮರುಪೂರಣ ಮತ್ತು ಮರುಬಳಕೆ, ಜಲಾಯನ ಅಭಿವೃದ್ದಿ, ವ್ಯಾಪಕರ ಅರಣ್ಯೀಕರಣಗೊಳಿಸುವುದಾಗಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಯ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.