ಕೆರೆಗಳ ಪುನರುಜ್ಜೀವನಕ್ಕೆ ಕ್ರಮ: ಸಚಿವ ಪ್ರಿಯಾಂಕ್

ಕಲಬುರಗಿ,ಮಾ.೭: ನಗರದ ಅಪ್ಪನ ಕೆರೆ ಸೇರಿದಂತೆ ಜಿಲ್ಲೆಯ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನವೀಕರಣಗೊಂಡ ಅಪ್ಪನಕೆರೆ ಉದ್ಯಾನವನ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡುತ್ತಾ, ಕೋವಿಡ್ ಸಂಧರ್ಭದಲ್ಲಿ ಬಂದ್ ಮಾಡಲಾಗಿದ್ದ ಅಪ್ಪನ ಕೆರೆಯನ್ನು ಪ್ರಾದೇಶಿಕ ಆಯುಕ್ತರ ವಿಶೇಷ ಆಸಕ್ತಿಯಿಂದಾಗಿ ಈಗ ಉದ್ಯಾನ ನವೀಕರಣಗೊಳಿಸಲಾಗಿದೆ. ಇದು ಸಾರ್ವಜನಿಕರ ಆಸ್ತಿಯಾಗಿದ್ದು, ಎಲ್ಲರೂ ಜವಾಬ್ದಾರಿಯುತವಾಗಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕು ಎಂದು ಮನವಿ ಮಾಡಿದರು.
ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಇನ್ಮೂ ಹೆಚ್ಚು ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು ತಾವು ಅಗತ್ಯ ಸಹಕಾರ ನೀಡಲು ಸಿದ್ದವಿರುವುದಾಗಿ ಇದೇವೇಳೆ ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು ಎಮ್ಮೆ ಹಾಲಿನ ನೂತನ ಪಾಕೆಟ್ ಬಿಡುಗಡೆ ಮಾಡಿದರು. ಜೊತೆಗೆ ಅಪ್ಪನ ಕರೆಯ ಕುರಿತಾದ ವಿಡಿಯೊ ತುಣುಕು ಬಿಡುಗಡೆಗೊಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಅಜಯಸಿಂಗ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಕಮಿಷನರ್ ಭುವನೇಶ ಪಾಟೀಲ್, ಜಿಡಿಎ ಅಧ್ಯಕ್ಷ ಮಜರ್ ಆಲಂಖಾನ್, ಕಲಬುರಗಿ, ಬೀದರ್ ಯಾದಗಿರಿ ಹಾಲು ಒಕ್ಕೂಟ ಅಧ್ಯಕ್ಷ ಆರ್.ಕೆ.ಪಾಟೀಲ್ ಸೇರಿದಂತೆ ಹಲವರಿದ್ದರು.