ಕೆರೆಗಳು ಖಾಲಿ; ಸಾರ್ವಜನಿಕರಿಗೆ ಬೋರ್ ನೀರೆ ಗತಿ


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಜೂ.20: ನಗರ ಮತ್ತು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕುಡಿಯುವ ನೀರಿಗಾಗಿ ಸಾರ್ವಜನಿಕರು ಪಡುತ್ತಿರುವ ಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ.  ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ತಾಲೂಕಿನಲ್ಲಿರುವ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 37 ಕೆರೆಗಳನ್ನು ನಿರ್ಮಾಣ ಮಾಡಲಾಗಿದ್ದು, ತಾಲೂಕಿನ ಬಂಡ್ರಾಳ್ ಕೆರೆಯಲ್ಲಿ 2 ತಿಂಗಳಿಗೆ ಆಗುವಷ್ಟು ನೀರು ಸಂಗ್ರಹವಿದ್ದು, ಇನ್ನುಳಿದಂತೆ 36 ಕೆರೆಗಳಲ್ಲಿ ನದಿಯಿಂದ ನೀರು ತುಂಬಿಸುವ 5 ಕೆರೆಗಳು ಈಗಾಗಲೇ ಸಂಪೂರ್ಣವಾಗಿ ಖಾಲಿಯಾಗಿದ್ದು ಮತ್ತು 31 ಕೆರೆಗಳಲ್ಲಿರುವ ನೀರು ಇನ್ನೊಂದು ವಾರದಲ್ಲಿ ಸಂಪೂರ್ಣವಾಗಿ ಖಾಲಿಯಾಗುತ್ತವೆ, ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು, 15ನೇ ಹಣಕಾಸು ಯೋಜನೆಯಡಿ ಬೋರ್‌ವೆಲ್ ಕೊರೆಸಿ ನೀರು ಪೂರೈಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.
ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 84 ಗ್ರಾಮಗಳಲ್ಲಿ 84 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 37 ಕೆರೆಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ 32 ಕೆರೆಗಳಿಗೆ ಎಲ್.ಎಲ್.ಸಿ. ಬಾಗೇವಾಡಿ, ಹಚ್ಚೊಳ್ಳಿ ಉಪ ಕಾಲುವೆಯಿಂದ ನೀರು ಹರಿಸಿ ತುಂಬಿಸಲಾಗುತ್ತದೆ. ಆದರೆ ಈ ಬಾರಿ ಕಾಲುವೆಯಲ್ಲಿ ನೀರಿರುವ ಸಂದರ್ಭದಲ್ಲಿ ಎಲ್.ಎಲ್.ಸಿ. ಕಾಲುವೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಶೇ.95ರಷ್ಟು ನೀರು ತುಂಬಿಸಲಾಗಿತ್ತು, ಆದರೆ ಬಾಗೇವಾಡಿ ಹಚ್ಚೊಳ್ಳಿ ಉಪ ಕಾಲುವೆ ವ್ಯಾಪ್ತಿಗೆ ಬರುವ ಕೆರೆಗಳಿಗೆ ಶೇ.70ರಷ್ಟು ಮಾತ್ರ ನೀರನ್ನು ತುಂಬಿಸಲು ಸಾಧ್ಯವಾಗಿದ್ದು, ಹಚ್ಚೊಳ್ಳಿ ಉಪ ಕಾಲುವೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಶೇ.65ಷ್ಟು ನೀರನ್ನು ಕೆರೆಗೆ ತುಂಬಿಸಿರುವುದರಿಂದ ಬಹುತೇಕ ಕುಡಿಯುವ ನೀರಿನ ಕೆರೆಗಳು ಖಾಲಿಯಾಗಲು ಕಾರಣವಾಗಿದೆ.
ಕೆರೆ ನಿರ್ವಹಣೆ ಮಾಡುವ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಗ್ರಾ.ಪಂ.ಅಧಿಕಾರಿಗಳು ಕೆರೆಗೆನೀರು ತುಂಬಿಸಲು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಮತ್ತು ಗುತ್ತಿಗೆದಾರರು ಕೆರೆಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಸಾರ್ವಜನಿಕರಿಗೆ ವಾರಕ್ಕೆ 2 ಸಲ ನೀರು ಬಿಡಲಾಗುತ್ತಿದ್ದು, ಆದರೂ ಕೆರೆಯಲ್ಲಿ ನೀರು ಬಹುತೇಕ ಇನ್ನೊಂದು ವಾರದಲ್ಲಿ ಸಂಪೂರ್ಣವಾಗಿ ಖಾಲಿಯಾಗುತ್ತಿದ್ದು, ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಾ.ಪಂ.ಇ.ಒ. ಮಡಗಿನ ಬಸಪ್ಪ ತಾಲ್ಲೂಕಿನ ಎಲ್ಲಾ ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನೀರಿನ ಪೂರೈಕೆಗೆ ಅಗತ್ಯವಿರುವಷ್ಟು ಬೋರ್‌ವೆಲ್‌ಗಳನ್ನು ಕೊರೆಸುವಂತೆ ಸೂಚನೆ ನೀಡಿದ್ದಾರೆ.
ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಗ್ರಾಮೀಣ  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಅಲ್ಲದೆ ಬಳಕೆಯ ನೀರಿಗೆ ಸಮಸ್ಯೆಯಾಗದಂತೆ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಾ.ಪಂ. ಇ.ಒ. ಮಡಗಿನ ಬಸಪ್ಪ ತಿಳಿಸಿದ್ದಾರೆ.
ತಾಲೂಕಿನಲ್ಲಿ ಬರುವ    ಎಲ್ಲಾ ಶುದ್ಧ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಘಟಕಗಳು ರಿಪೇರಿಗೆ ಬಂದರೆ, ತಕ್ಷಣವೇ ಮಾಹಿತಿ ನೀಡಬೇಕು ಹಾಗೂ ಘಟಕಗಳನ್ನು ರಿಪೇರಿ ಮಾಡಿಸಿ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ.ಇ.ಇ. ರವಿಂದ್ರನಾಯ್ಕ್ ತಿಳಿಸಿದ್ದಾರೆ.
ಕಾಲುವೆಯಲ್ಲಿ ನೀರು ಹರಿಯುವಾಗ ಕೆರೆಗಳನ್ನು ತುಂಬಿಸಲು ಅಧಿಕಾರಿಗಳು, ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸಿದ್ದಾರೆ. ಸದ್ಯ ತುಂಗಭದ್ರ ಜಲಾಶಯದಲ್ಲಿ ನೀರಿಲ್ಲ, ಇದರಿಂದಾಗಿ ನಮ್ಮೂರಿನ ಕೆರೆಗಳಿಗೆ ನೀರು ತುಂಬಿಸುವ ಮೂಲವೇ ಇಲ್ಲದಂತಾಗಿದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಕರೂರು ಗ್ರಾಮಸ್ಥ ಆರ್.ಬಸವರೆಡ್ಡಿ ತಿಳಿಸಿದರು.