ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಸ್ಟರ್ ಪ್ಲಾನ್

ಚಾಮರಾಜನಗರ, ಏ.20- ಜಿಲ್ಲಾ ವ್ಯಾಪ್ತಿಗೆ ಬರುವ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಇಂದು ಸಭೆ ನಡೆಸಿ ವಿವರವಾಗಿ ಚರ್ಚೆ ನಡೆಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿಂದು ಸಚಿವರು ಕೆರೆಗಳಿಗೆ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಬಗ್ಗೆ ಜಿಲ್ಲೆಯ ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಆಲಿಸಿದರು. ಜಿಲ್ಲಾ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಮಾತನಾಡಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡಬೇಕಿದೆ. 400 ರಿಂದ 450 ಅಡಿಗೆ ನೀರು ಲಭ್ಯವಾಗುವಂತೆ ಮಾಡಬೇಕಿದೆ. ಒಟ್ಟಾರೆ ಈಗ ಕುಸಿತವಾಗಿರುವ ಅಂತರ್ಜಲ ಮಟ್ಟವನ್ನು ಶೇ.50ರಷ್ಟಾದರೂ ವೃದ್ದಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬಿಸಿದರೆ ಸದ್ಬಳಕೆಯಾಗುತ್ತದೆ ಎಂದರು.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಕೊನೆಯ ಭಾಗದವರೆಗೂ ನೀರು ಹರಿಸುವ ಉದ್ದೇಶವನ್ನು ಒಳಗೊಂಡಂತೆ ಯೋಜನೆ ಸಿದ್ದಪಡಿಸಬೇಕಿದೆ.
ಹೀಗಾಗಿ ವಿಸೃತ ಯೋಜನಾ ವರದಿಯನ್ನು ಅಧಿಕಾರಿಗಳು ನೀಡಬೇಕು. ಈ ಬಗ್ಗೆ ಮತ್ತೊಮ್ಮೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುತ್ತದೆ. ಅಧಿಕಾರಿಗಳು ವಿವರವಾಗಿ ಯೋಜನೆ ಸಿದ್ದಪಡಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಪ್ರತೀ ತಾಲೂಕಿನ ಕೆರೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಶಾಸಕರೊಂದಿಗೆ ವಿವರವಾಗಿ ಸಮಾಲೋಚಿಸಿ ಆಯಾ ವ್ಯಾಪ್ತಿಯಲ್ಲಿ ಮಾಸ್ಟರ್ ಪ್ಲಾನ್ ಯೋಜನೆಗೆ ಸೇರ್ಪಡೆ ಹಾಗೂ ಮಾರ್ಪಾಡು ಮಾಡಬಹುದಾದ ಕೆರೆಗಳ ಕುರಿತು ವಿವರ ಪಡೆದುಕೊಂಡರು.
ಜನಪ್ರತಿನಿಧಿಗಳು ಪ್ರಸ್ತಾಪಿಸಿರುವ ಕೆರೆಗಳ ಅಭಿವೃದ್ದಿ ಸಂಬಂಧ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕೆರೆಗಳಿದ್ದು, ಈ ಪೈಕಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 60 ಕೆರೆಗಳಿವೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆಂಬ ರೂಪುರೇಷೆ ಮಾಡಬೇಕಿರುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಮಾಸ್ಟರ್ ಪ್ಲಾನ್ ಮಾಡಿಸಿ ಇದಕ್ಕೆ ಸೇರ್ಪಡೆ ಹಾಗೂ ಮಾರ್ಪಾಡು ಮಾಡುವ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರವಾಗಿ ಚರ್ಚೆ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೂಪುರೇಷೆ ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಜಿಲ್ಲೆಯ ಎಲ್ಲಾ ಕೆರೆಗಳಿಗೆ ಶೇ. 60ರಷ್ಟು ನೀರು ಕೊಡಬೇಕೆಂಬ ಆಲೋಚನೆ ಮಾಡಲಾಗಿದೆ. ನೀರಿನ ಮೂಲಗಳು ಎಲ್ಲಿ ಇವೆ. ಯಾವ ಕೆರೆಗೆ ಎಲ್ಲಿ ನೀರನ್ನು ಪಂಪ್ ಮಾಡಬೇಕು. ಎಲ್ಲರಿಗೂ ನೀರು ತಲುಪಬೇಕು ಎಂಬ ಉದ್ದೇಶದ ಯೋಜನೆ ಸಂಬಂಧ ವಿಸೃತವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 64 ಕೆರೆಗಳ ಪೈಕಿ ಈಗಾಗಲೇ 29 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಉಳಿದ ಕೆರೆಗಳ ನಿರ್ವಹಣೆ ಕಾರ್ಯ ಮಾಡಲಾಗುತ್ತಿದ್ದು ಇದಕ್ಕೆ ಯಾವುದೇ ಅಡಚಣೆಯಾಗಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು ಸುಸ್ಥಿತಿಯಲ್ಲಿವೆ. ಜಿಲ್ಲೆಯ ಎಲ್ಲಾ ಕೆರೆಗಳು ಸದುಪಯೋಗವಾಗುವ ಉದ್ದೇಶದೊಂದಿಗೆ ಮಾಸ್ಟರ್ ಪ್ಲಾನ್ ಪ್ರಾಜೆಕ್ಟ್ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಯವರಾದ ಮೃತ್ಯುಂಜಯಸ್ವಾಮಿ, ಪ್ರಧಾನ ಎಂಜಿನಿಯರ್ ಹೆಚ್.ಎಲ್. ಪ್ರಸನ್ನ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್. ನರೇಂದ್ರಬಾಬು, ಚಾಮರಾಜನಗರ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎಸ್. ಭಾಸ್ಕರ್ ಇತರರು ಹಾಜರಿದ್ದರು.