ಕೆರೆಗಳನ್ನು ತುಂಬಿಸಲು ಒಟ್ಟಾಗಿ ಕಾರ್ಯನಿರ್ವಹಿಸಿ


ಸಂಜೆವಾಣಿ ವಾರ್ತೆ
 ಸಿರುಗುಪ್ಪ, ಜು.23: ತುಂಗಭದ್ರ ಜಲಾಶಯದಿಂದ ಎಲ್.ಎಲ್.ಸಿ. ಕಾಲುವೆಗೆ ನೀರನ್ನು ಬಿಟ್ಟಿದ್ದು, ಅಧಿಕಾರಿಗಳು ಖಾಲಿಯಾಗಿರುವ ಎಲ್ಲಾ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಬೇಕು, ಅಲ್ಲದೆ ಸಿರುಗಪ್ಪ ಹೊಸ ಕೆರೆಗೂ ನೀರು ಹರಿಸಲು ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಎಂ.ಎಸ್.ಸೋಮಲಲಿಂಗಪ್ಪ ತಿಳಿಸಿದರು.
ನಗರದ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಾರ್ಚ್‍ನಲ್ಲಿ ತುಂಬಿಸಲಾಗಿದ್ದ ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗಿವೆ. ಆದ್ದರಿಂದ ಖಾಲಿಯಾಗಿರುವ ಎಲ್ಲಾ ಕೆರೆಗಳಿಗೆ ಕಾಲುವೆಯಿಂದ ನೀರನ್ನು ಹರಿಸಬೇಕು, ಅಲ್ಲದೆ ರೈತರ ಜಮೀನುಗಳಿಗೂ ಸಮಪರ್ಕಕವಾಗಿ ನೀರು ಹರಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು, ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುವವರಿಗೆ ಕಡಿವಾಣ ಹಾಕಬೇಕು, ಆಗ ಮಾತ್ರ ಕಾಲುವೆಯಲ್ಲಿ ಸುಗಮವಾಗಿ ನೀರು ಹರಿದುಬರಲು ಸಾಧ್ಯವಾಗುತ್ತದೆ.
ಸಿರುಗುಪ್ಪ ಕೆರೆ ಸೇರಿದಂತೆ ವಿವಿದ ಕೆರೆಗಳನ್ನು ತುಂಬಿಸಲು ಬಾಗೇವಾಡಿ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದು ಬರುವಂತೆ ನೋಡಿಕೊಂಡರೆ ಮಾತ್ರ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನೀರಾವರಿ ಇಲಾಖೆ ಮತ್ತು ಪೊಲೀಸರು ಈ ಕಾಲುವೆ ಮೇಲೆ ನಿರಂತರ ಗಸ್ತು ತಿರುಗಬೇಕು, ಅಧಿಕಾರಿಗಳು ನೆಪ ಹೇಳದೆ ತಮಗೆ ನಿರ್ವಹಿಸಿದ ಕಾರ್ಯವನ್ನು ಚಾಚು ತಪ್ಪದೆ ಮಾಡಬೇಕೆಂದು ಸೂಚಿಸಿದರು.
ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾ.ಪಂ.ಇ.ಒ. ಎಂ.ಬಸಪ್ಪ, ಪೌರಾಯುಕ್ತ ಪ್ರೇಮ್‍ಚಾಲ್ರ್ಸ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.