ಕೆರೆ,ಕುಂಟೆ ನಂತರ ಬೆಟ್ಟಗಳ ಮೇಲೆ ಭೂಗಳ್ಳರ ಕಣ್ಣು: ಅಕ್ರಮ ನಿವೇಶನ ಮಾರಾಟ-ಕೊಟ್ಯಂತರ ಲೂಟಿ

ಇಂದು ಶ್ರೀ ನಂದೀಶ್ವರ ದೇವಸ್ಥಾನ ಪಕ್ಕ ಬೆಟ್ಟದಲ್ಲಿ ಮನೆ ನಿರ್ಮಾಣ ಯತ್ನ-ದೇವಸ್ಥಾನ ಸಮಿತಿಯಿಂದ ಆಕ್ಷೇಪ
ರಾಯಚೂರು ಜೂ ೨೩:-ನಗರದ ಕೆರೆ, ಕುಂಟೆ, ಉದ್ಯಾನವನ ಮತ್ತು ಇತರೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಮೀನು ಅತಿಕ್ರಮಿಸಿ ಮಾರಾಟ ಮಾಡುವ ಭೂಗಳ್ಳರು ಈಗ ನಗರ ಗುಡ್ಡಗಳನ್ನು ಅತಿಕ್ರಮಿಸಿ ನಿವೇಶ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಜಿಲ್ಲಾಡಳಿತ,ನಗರಸಭೆ ಮತ್ತು ಆರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
ನಗರದ ಬಹುತೇಕ ಗುಡ್ಡಗಳಲ್ಲಿ ನೂರಾರು ಮನೆಗಳ ನಿರ್ಮಿಸಿ ಜನರು ವಾಸವಾಗಿದ್ದಾರೆ. ಇಲ್ಲಿಯ ನಿವಾಸಿಗಳಿಗೆ ಈ ನಿವೇಶನ ಯಾರು ಮಾರಿದರು ಎನ್ನುವುದಕ್ಕೆ ಯಾವುದೆ ದಾಖಲೆಗಳಿಲ್ಲ. ಆದರೆ ಜಿಲ್ಲಾಡಳಿತ. ನಗರಸಭೆ ಮತ್ತು ಪ್ರಾಚ್ಯವಸ್ತು ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳ ಜಾಣ ಕುರುಡು ನೀತಿಯಿಂದ ಬಹುತೇಕ ಗುಡ್ಡಗಳು ಅತಿಕ್ರಮಗೊಂಡು ಜನರು ಅತ್ಯಂತ ಅಪಾಯದ ಸ್ಥಿತಿಯಲ್ಲಿ ಬದುಕು ನಡೆಸುವಂತೆ ಮಾಡಿದೆ.
ನಗರದ ಶ್ರೀ ನಂದೀಶ್ವರ ದೇವಸ್ಥಾನದ ಪಕ್ಕದಲ್ಲಿ ಇರುವ ಬೆಟ್ಟದಲ್ಲು ಇಂದು ಕೆಲವರು ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದನ್ನು ಕಂಡ ವಾರ್ಡ್ ೪ ರ ಶ್ರೀ ನಂದೀಶ್ವರ ದೇವಸ್ಥಾನ ಸಮಿತಿ ಕೆಲವರು ಮನೆ ನಿರ್ಮಾಣ ತಡೆದಿದ್ದಾರೆ.ಈ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆಂದ ಬಂದವರು ಈ ಸ್ಥಳ ನಾವು ಖರೀದಿಸಿದ್ದವೇ ಎಂದು ನಗರಸಭೆಗೆ ಸಂಬಂಧಿಸಿದ ಕೆಲ ಕಾಗದ ಪತ್ರ ತೋರಿಸಿದ್ದು ಗಮನಾರ್ಹವಾಗಿತ್ತು. ಒ.ಎಲ್ ನಂಬರ್ ಆಧಾರದಲ್ಲಿ ಈ ಬೆಟ್ಟದಲ್ಲಿ ನಿವೇಶ ಮಾರಾಟ ಮಾಡಲಾಗಿದೆ.ಈ ಬೆಟ್ಟದಲ್ಲಿ ಯಾರು ನಿವೇಶನ ಮಾರಾಟ ಮಾಡಿದರು ಎನ್ನವುದು ಮಾತ್ರ ರಹಸ್ಯವಾಗಿದೆ.
ನಂದೀಶ್ವರ ದೇವಸ್ಥಾನದ ಪಕ್ಕದಲ್ಲಿ ಇರುವ ಈ ಬೆಟ್ಟದಲ್ಲಿ ಶ್ರೀ ರಾಮನ ಪಾದುಕೆಗಳಿವೆ ಎಂಬುವುದು ಅಲ್ಲಿಯ ಜನರ ನಂಬಿಕೆಯಾಗಿದೆ. ಕಳೆದ ಅನೇಕ ವರ್ಷಗಳಿಂದ ಈ ಪಾದುಕೆ ಅಕ್ಕ ಪಕ್ಕದ ಜನರು ಪೂಜಿಸುವುದು ಪರಂಪರೆಯಾಗಿದೆ. ಶ್ರೀರಾಮ ಪಾದುಕೆ ಇರುವ ಈ ಬೆಟ್ಟದಲ್ಲಿ ಅಕ್ರಮ ನಿವೇಶ ಮಾಡಿ ಮಾರಾಟ ಮಾಡುವ ಮೂಲಕ ಶ್ರೀ ಪಾದುಕೆ ಬೆಟ್ಟವನ್ನು ಭೂಗಳ್ಳರು ಅತಿಕ್ರಮಿಸುತ್ತಿದ್ದರು ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಮೌನವಾಗಿರುವುದು ಏಕೆ.ಯಾವ ಕಾಣದ ರಾಜಕೀಯ ಪ್ರಭಾವ ಈ ಅಧಿಕಾರಿಗಳನ್ನು ತಡೆದಿದೆ?.
ನಂದೀಶ್ವರ ದೇವಸ್ಥಾನದ ಪಕ್ಕ ಈ ಬೆಟ್ಟ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂಬುದು ಅಲ್ಲಿಯ ಜನರ ಹೇಳಿಕೆಯಾಗಿದೆ. ಅಕ್ರಮವಾಗಿ ನಿವೇಶ ಮಾಡುವುದಕ್ಕೆ ಸಂಬಂಧಿಸಿ ಅರಣ್ಯ ಅಧಿಕಾರಿಗಳ ಗಮನ ಸೆಳೆದರೂ ಈ ಬಗ್ಗೆ ತನಿಖೆ ನಡೆಸಿ ನಗರಸಭೆಯಿಂದ ನೀಡಲಾದ ಒಎಲ್ ನಂಬರ್ ರದ್ದು ಪಡಿಸಲು ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನಕ್ಕೆಡೆ ಮಾಡಿದೆ.ಸ್ಥಳೀಯರ ತೀವ್ರ ಆಕ್ಷೇಪದಿಂದ ಇಂದು ಬೆಟ್ಟದ ಮೇಲೆ ಮನೆ ನಿಮಾಣಕ್ಕೆ ತಡೆ ಬಿದ್ದಿದೆ ಆದರೆ, ಮುಂದೆ ಯಾರು ತಡೆಯುತ್ತಾರೆ?.
ನಗರದಲ್ಲಿ ಬೆಟ್ಟಗಳ ಅತಿಕ್ರಮಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ,ಯಾರು ಈ ನಿವೇಶ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಪಡೆದು ಅಂತಹ ಭೂಗಳ್ಳರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮ ಏಕೆ ಕೊಳ್ಳುತ್ತಿಲ್ಲ ಎನ್ನವುದು ಸರ್ವಾಜನಿಕ ಪ್ರಶ್ನೆಯಾಗಿದೆ.ಬೆಟ್ಟ ಪ್ರದೇಶಗಳಲ್ಲಿ ಜನರ ವಾಸ ಅತ್ಯಂತ ಅಪಾಯಕಾರಿಯಾಗಿದೆ. ನಗರಸಭೆಯಿಂದ ಮೂಲಭೂತ ಸೌಕರ್ಯ ಒದಗಿಸುವ ಸಮಸ್ಯೆ ಒಂದೆಡೆಯಾದರೆ. ಮತ್ತೊಂದೆಡೆ ಪ್ರಾಕೃತಿ ಆಪತ್ತಿಗೆ ಇಲ್ಲಿಯ ನಿವಾಸಿಗಳು ತೀವ್ರಗತಿಯಲ್ಲಿ ಗುರಿಯಾಗುವ ಸಾಧ್ಯತಗಳಿವೆ.
ನಗರದಲ್ಲಿ ಇರುವ ಅತ್ಯಂತ ಬೆಲೆಬಾಳುವ ಕೆರೆ,ಕುಂಟೆ, ಬೆಟ್ಟ ಸ್ಥಳಗಳನ್ನು ಯಾರೊ ಕೆಲ ಭೂಗಳ್ಳರು ಆಕ್ರಮವಾಗಿ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಮಾಡುತ್ತಿದ್ದರೂ, ಜಿಲ್ಲಾಡಳಿತ, ನಗರಸಭೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಈ ಭೂಗಳ್ಳರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ, ಅಕ್ರಮ ನಿವೇಶನಗಳನ್ನು ಏಕೆ ತೆರವುಗೊಳಿಸುತ್ತಿಲ್ಲ ಎನ್ನವುದು ಯಕ್ಷ ಪ್ರಶ್ನೆಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳ ಈ ಮೌನ ನಗರದಲ್ಲಿ ಅತಿಕ್ರಣದಾರರಿಗೆ ನಗರದಲ್ಲಿ ಭೂ ಅತಿಕ್ರಣ ಸುಲುಭ ಎನ್ನುವಂತೆ ಮಾಡಿದೆ.