ಕೆರೆಕಟ್ಟೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.21: ಕೆರೆಕಟ್ಟೆಗಳು ನಮ್ಮ ಪೂರ್ವಜರು ನಮಗೆ ಕೊಟ್ಟಿರುವ ಬಳುವಳಿಗಳಾಗಿದ್ದು ನಾವುಗಳು ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಕರೆ ನೀಡಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಾಕ್ಷಿಬೀಡು ಗ್ರಾಮದ ಕೆರೆ ಕಾಮಗಾರಿಯ ಉದ್ಘಾಟನೆ ಹಾಗೂ ಗುದ್ದಲಿಪೂಜೆ ಮಾಡಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಪ್ರತಿವರ್ಷ ನಮ್ಮೂರ ಕೆರೆ, ನಮ್ಮ ಕೆರೆ ಕಾರ್ಯಕ್ರಮ ಯೋಜನೆಯಡಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಅಳಿವಿನ ಅಂಚಿನಲ್ಲಿರುವ ಹಾಗೂ ಜನಜಾನುವಾರುಗಳಿಗೆ ಅತೀ ಅವಶ್ಯಕವಾಗಿರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದು ಅದರಂತೆ ಈ ವರ್ಷ ಸಾಕ್ಷೀಬೀಡು ಗ್ರಾಮದ ಕೆರೆ ಅಭಿವೃದ್ದಿ ಕಾಮಗಾರಿ ಮಾಡಲು ಆರಂಭಿಸಲಾಗುತ್ತಿದೆ. ದೇವರ ಆಶೀರ್ವಾದದಿಂದ ಕೆಲಸ ಚೆನ್ನಾಗಿ ನಡೆಯಲಿ. ಗ್ರಾಮದ ಪರಿಮಿತಿಯಲ್ಲಿರುವ ಹಾಗೂ ಹಿರಿಯರು ಮಾಡಿಕೊಟ್ಟಿರುವ 24 ಎಕರೆಯುಳ್ಳ ಈ ಕೆರೆಯನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು, ಎಲ್ಲರೂ ಈ ಕೆರೆಯಿಂದ ಪ್ರಯೋಜನ ಪಡೆದುಕೊಳ್ಳಿ, ಒಳ್ಳೆಯ ಕೆಲಸಕ್ಕೆ ಎಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆರೆ ಸಮಿತಿ ಅಧ್ಯಕ್ಷ ರಾಮೇಕೃಷ್ಣೇಗೌಡ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಕುಮಾರ್, ನಾಗರಾಜ್, ಜವರೇಗೌಡ, ಗುತ್ತಿಗೆದಾರ ಮಂಜೇಗೌಡ, ಸತೀಶ್‍ಪ್ರಭು, ದೇವೇಗೌಡ, ಶಿವಲಿಂಗೇಗೌಡ, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಜರಿದ್ದರು.