ಕೆರಳಿಸುವ ಕಾರ್ಯ ನಿಲ್ಲಲಿ, ಹೃದಯ ಅರಳಿಸುವ ಕಾರ್ಯ ನಡೆಯಲಿ: ಮುರುಘಾ ಶರಣರು

ದಾವಣಗೆರೆ.ಜು.೧೪:  ಪ್ರಸ್ತುತ ದಿನಗಳಲ್ಲಿ ಕೆರಳಿಸುವ ಕಾರ್ಯ ಹೆಚ್ಚಾಗುತ್ತಿದ್ದು. ಇದು ನಿಂತು ಅರಳಿಸುವ ಕಾರ್ಯ ನಡೆಯಬೇಕು.‌ ಸಹಜ ಶಿವಯೋಗದಿಂದ ಹೃದಯವನ್ನು ಅರಳಿಸಲು ಸಾಧ್ಯ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ಶಿವಯೋಗ ಆಶ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಇಂದು ಬೆಳಿಗ್ಗೆ ನಡೆದ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಕೆರಳುವಿಕೆಯಿಂದ ಸಾಮಾಜಿಕ ಕ್ಷೋಭೆ, ಅಶಾಂತಿ ಉಂಟಾಗುತ್ತದೆ ಎಂದರುಮನುಷ್ಯನ ಜೀವನದಲ್ಲಿ, ಹೃದಯದಲ್ಲಿ ಬಸವಾದಿ ಶರಣರ ಒಳ್ಳೆಯ ತತ್ವಾದರ್ಶ ಅಳವಡಿಸಿಕೊಳ್ಳಬೇಕು. ಶಿವಯೋಗದ ಮೂಲಕ  ಒಳಗಣ್ಣು ತೆರೆದುಕೊಳ್ಳುತ್ತದೆ ಎಂದರು.ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಅವರ ಕಣ್ಣುಗಳು ಚಂಚಲತೆ, ಆಕರ್ಷಣೆಯತ್ತ ಸಾಗುತ್ತಿವೆ. ಇದು ನಿಲ್ಲಬೇಕು. ಅವರಲ್ಲಿ ಏಕಾಗ್ರತೆ ಬರಬೇಕು. ಕಣ್ಣುಗಳಿಗೆ ಜ್ಞಾನದ ದರ್ಶನ ಮಾಡಿಸಬೇಕಾದರೆ ಶಿವಯೋಗ ಮಾಡಬೇಕು ‌. ಇದರಿಂದ ಅವರಲ್ಲಿನ ದೃಷ್ಟಿ ದೋಷವೂ ನಿವಾರಣೆ ಆಗುತ್ತದೆ ಎಂದರು.ಸಮರ್ಪಣೆ, ಏಕಾಗ್ರತೆ, ಪರಿಪೂರ್ಣತೆಯಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದಾಗಿದೆ ಎಂದೂ ಹೇಳಿದರು.ಹಾವೇರಿ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಮಾತನಾಡಿ, ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಹಜ ಶಿವಯೋಗದ ಮೂಲಕ ಅಂತರಂಗದ ಯಾತ್ರೆ ಮಾಡಿಸುತ್ತಾ ಸುಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ಸಹಜ ಶಿವಯೋಗದ ಮೂಲಕ ದೊಡ್ಡ ವ್ಯಕ್ತಿಗಳಾಗಬೇಕು ಎಂದರು.ಶೂನ್ಯ ಪೀಠ ಚನ್ನಬಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರು ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮ, ಧಾರ್ಮಿಕ ಚಿಂತನೆಯೆ ಭದ್ರ ಬುನಾದಿ ಆಗಿದೆ ಎಂದರು.ಇತ್ತೀಚೆಗೆ ವಿದ್ಯಾರ್ಥಿಗಳು ಬದಲಾಗುತ್ತಿದ್ದಾರೆ. ಗುರು ಹಿರಿಯರಿಗೆ ಅವರು ಗೌರವ ನೀಡುತ್ತಿಲ್ಲ. ಪಾಲಕರು ಕೂಡಾ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಹೊರ ದೇಶಕ್ಕೆ ಹೋಗಬೇಕು. ಕೈತುಂಬ ಹಣ ಸಂಪಾದಿಸಬೇಕೆಂಬ ಭ್ರಮೆಯಲ್ಲಿ ಇದ್ದಾರೆ ಎಂದು ವಿಷಾದ ವ್ಯಕ್ತಪಡಿಸಿ, ಇದರಿಂದ ಹೊರಬರಬೇಕಾಗಿದೆ. ಮನದಲ್ಲಿ ಅಡಗಿರುವ ಕತ್ತಲೆಯನ್ನು ಹೋಗಲಾಡಿಸಲು ಆಧ್ಯಾತ್ಮಿಕ ಚಿಂತನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.ಪ್ರಸ್ತುತ ದಿನಗಳಲ್ಲಿ ಶ್ರೀ ಮುರುಘಾ ಶರಣರ ಕಾರ್ಯ ಶ್ಲಾಘನೀಯವಾಗಿದೆ. ಶರಣರ ತತ್ವವನ್ನು ಜಾರಿಗೆ ತರುವುದರ ಜೊತೆಗೆ  ದೇಶ ವಿದೇಶಗಳಲ್ಲಿ  ಪ್ರಚಾರ ಮಾಡುತ್ತಿದ್ದಾರೆ. ೧೦೦ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಅಲ್ಲದೆ ಸಹಜ ಶಿವಯೋಗದ ಮೂಲಕ ಸುಖ ಶಾಂತಿ ನೆಮ್ಮದಿ ನೀಡುತ್ತಾ ಮನದ ಬೆಳಕು ಬೆಳಗಿಸುತ್ತಾ ಪ್ರತ್ಯಕ್ಷ ಅಭಿನವ ಬಸವಣ್ಣ ಆಗಿದ್ದಾರೆ ಎಂದರು.ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮಿಗಳು, ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಶ್ರೀ, ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಬಸವ ಮಾಚಿದೇವ ಶ್ರೀ, ಚಿತ್ರದುರ್ಗ ವನಶ್ರೀ ಮಠದ ಡಾ. ಬಸವಕುಮಾರ ಶ್ರೀ, ಸಿದ್ದರಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಶ್ರೀಗಳು, ಜನವಾಡದ ಅಲ್ಲಮಪ್ರಭು ಆಶ್ರಮದ  ಮಲ್ಲಿಕಾರ್ಜುನ ಶ್ರೀ ಸಮ್ಮುಖ ವಹಿಸಿದ್ದರು.ವೀರಣ್ಣ ಜಿ.ಎಸ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಲಂಬಿ ‌ಮುರುಗೇಶ ಸ್ವಾಗತಿಸಿದರು.  ವಿಜಯ ನಗರ ಬಸವ ಕೇಂದ್ರದ ಅಧ್ಯಕ್ಷ ಡಿ.ಟಿ. ಅರುಣಕುಮಾರ, ದಾವಣಗೆರೆ ಲಯನ್ಸ್ ಕ್ಕಬ್ ಅಧ್ಯಕ್ಷ ಎನ್.ಆರ್. ನಾಗಭೂಷಣ, ಮುತ್ತಣ್ಣ ಅಂಗಡಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.